Wednesday, December 15, 2010

ಅನಾಮಿಕ ಆತ್ಮೀಯಳ ಕಾಗದ…!!!

ಕ್ ಟಕ್…ಆರೋ ಬಾಗಿಲು ಬಡಿದಾಂಗೆ ಆತು. ಬಾಗಿಲು ತೆಗೆತ್ತೆ ಪೋಸ್ಟ್ ಮೇನು ’ಸರ್ ಪೋಸ್ಟ್..’ ಹೇಳಿ ಒಂದು ಕಾಗದ ಕೊಟ್ಟತ್ತು. ಚೆಲಾ.. ಮೊಬೈಲ್, ಮಿಂಚಂಚೆ ಇಪ್ಪಗ ಕಾಗದ ಬರದವು ಆರಪ್ಪಾ ಹೇಳಿ ಕಾಗದವ ತಿರುಗಿಸಿದರೆ ಫ್ರಮ್ ಎಡ್ರಸ್ಸೇ ಇಲ್ಲೆ! (ಈಗ ಇನ್ಸುರೆನ್ಸ್ ಕಟ್ಟೆಕ್ಕು ಹೇಳ್ತ ಕಾಗದ ಮಾತ್ರ ಬಪ್ಪದಿದಾ… ಉಳುದ್ದೆಲ್ಲಾ ಫೋನ್, ಇಲ್ಲದ್ರೆ ಕಂಪ್ಯೂಟಿರಿಲ್ಲೆ ಆವುತ್ತು)
ಆರು ಬರದ್ದಾಯಿಕ್ಕು ಹೇಳ್ತ ಕುತೂಹಲಲ್ಲೇ ಕಾಗದವ ಒಡದೆ.

ಹಾಯ್,
ಆರಪ್ಪಾ ಇದು ಈ ಮೇಲ್, ಮೊಬೈಲ್, ಆರ್ಕುಟ್, ಫೇಸ್‌ಬುಕ್ ಇಪ್ಪಗ ಕಾಗದ ಬರದ್ದು ಹೇಳಿ ಗ್ರೇಶುತ್ತಾ ಇದ್ದೆಯಾ? ನಿನಗೆ… ಓ ಸಾರಿ… ಆನು ನಿನ್ನ ಏಕವಚನಲ್ಲೇ ದಿನೆಗೊಳುತ್ತೆ, ಬಹುವಚನಲ್ಲಿ ಅಷ್ಟೊಂದು ಕ್ಲೋಸ್‌ನೆಸ್ ಇರ‍್ತಿಲ್ಲೆ ಹೇಳ್ತದು ಎನ್ನ ಅಭಿಪ್ರಾಯ. ಸೋ ಪ್ಲೀಸ್… ಅಡ್ಜೆಸ್ಟ್ ಮಾಡು. ಹೇಳಿದಾಂಗೆ ನಿನಗೆ ಮೇಲ್ ಮಾಡ್ಳೆ ಅಥವಾ ಮೊಬೈಲಿಲ್ಲಿ ಮೆಸೇಜ್ ಮಾಡ್ಳೆ ಆವುತ್ತಿತು. ಎನಗೆ ಅದು ಇಷ್ಟ ಇಲ್ಲೆ. ಕಾಗದಲ್ಲಿ ಬರವಾಗ ಬಪ್ಪ ಭಾವನೆಗೊ, ಕಂಪ್ಯೂಟರಿಲ್ಲಿ ಟೈಪ್ ಮಾಡುವಾಗ ಬತ್ತಿಲ್ಲೆ, ಇನ್ನು ಮೊಬೈಲಿಲ್ಲಿ ಸಾಧ್ಯವೇ ಇಲ್ಲೆ. ನಿನ್ನ ತಲೆಗೆ ಈಗ ಹುಳು ಹೊಕ್ಕಿಕ್ಕು ಅಲ್ಲದಾ? ತಾಳ್ಮೆ ಇರಲಿ…ತಾಳಿದವನು ಬಾಳಿಯಾನು ಅಲ್ಲದಾ!

ಖಂಡಿತವಾಗಿಯೂ ಆನು ಆರು ಹೇಳಿ ಹೇಳ್ತಿಲ್ಲೆ. ನಿನ್ನ ಎನಗೆ ಗೊಂತಿದ್ದು, ನೀನೂ ಎನ್ನ ನೋಡಿಪ್ಪೆ, ಆದರೆ ನಾವಿಬ್ರು ಪರಸ್ಪರ ಮಾತಾಡಿದ್ದಿಲ್ಲೆ. ಸೋ ಆನು ನಿನಗೆ ಅನಾಮಿಕ ಆತ್ಮೀಯಳು!

ಎನಗೆ ಇನ್ನು ನೆಂಪಿದ್ದು ನಮ್ಮ ಕಾಲೇಜು ಡೇಸ್‌ಗಳ. ನೀನು ರಾಮನಜ್ಜನ(ಒಪ್ಪಣ್ಣನ) ಕಾಲೇಜಿಂಗೆ ಹೋಗಿಯೊಂಡಿದ್ದರೆ ಎನ್ನದುಪುರ್ಬಜ್ಜನ ಕಾಲೇಜು! ನಿನ್ನ ಸಬ್ಜೆಕ್ಟ್ ಸೈನ್ಸ್ ಹೇಳಿ ಎನಗೆ ಗೊಂತಿತ್ತು. ಎನಗೆ ಅದು ವ್ಯರ್ಜ್ಯ. ಸೋ ಆನು ಅಪ್ಪಿಕೊಂಡದು ಆರ್ಟ್ಸ್‌ನ.
ಆನು ಮೊದಲು ನಿನ್ನ ಕಂಡದು ಉಪ್ಪಿನಂಗಡಿ ಬಸ್‌ಸ್ಟೇಂಡಿಲ್ಲಿ. ಚಿಗುರು ಮೀಸೆ, ಗೆಡ್ಡವ ಕೆರಕ್ಕೊಂಡು ಗುರ್ತದವರೊಟ್ಟಿಂಗೆ ಲೊಟ್ಟೆ ಪಟ್ಟಾಂಗ ಹೊಡಕ್ಕೊಂಡಿಪ್ಪ ಸೀನಿಲ್ಲಿ. ಎಂತ ಗೊಂತಿಲ್ಲೆ ನಿನ್ನ ಕಂಡಪ್ಪಗ ತುಂಬಾ ಕೊಶಿ ಆತು. ಶಾರ್ಪ್ ಕಣ್ಣು, ನಿನ್ನ ನೆಗೆ ಎನ್ನ ತುಂಬಾ ಆಕರ್ಷಿಸಿತ್ತು. ಏನೋ ಗೊಂತಿಲ್ಲೆ ಮೊದಲ ಸರ್ತಿ ಮನಸ್ಸಿಲ್ಲಿ ಏನೋ ಒಂಥರಾ,,,ಭಾವನೆ ಬೆಳವಲೆ ಶುರು ಆತು… ತಪ್ಪು ತಿಳ್ಕೊಳೆಡ… ಅದು ಆತ್ಮೀಯ ಸ್ನೇಹ ಭಾವನೆ… ನೀನು ಎನ್ನ ಬೆಸ್ಟ್ ಫ್ರೆಂಡ್ ಹೇಳಿ ಅಂಬಗಳೆ ಆನು ನಿರ್ಧರಿಸಿದೆ.

ಆ ದಿನಂದ ನಿನ್ನ ಕಾಂಬಗ ಮನಸ್ಸಿಲ್ಲಿ ಕೊಶಿ ಕೊಶಿ. ನಿನ್ನ ಕಂಡ ದಿನ ಪೂರ್ತಿ ಆನು ಫುಲ್ ಫ್ರೆಷ್ ಆಗಿಯೊಂಡಿತ್ತೆ. ಕ್ಲಾಸಿಲ್ಲಿ ಲೆಕ್ಚರರ್‌ಗ ಬೈದರೂ ಫ್ರೆಂಡ್ಸುಗ ಕಿರಿಕಿರಿ ಮಾಡಿದರೂ ಎನ್ನ ಮೂಡು ಹಾಳಾಗಿಯೊಂಡು ಇತ್ತಿದಿಲ್ಲೆ. ಕಾರಣ ನೀನು. ಒಂದು ದಿನ ಕಾಣದ್ದರೆ ಆ ದಿನ ಆನು ಸ್ವಿಚ್ ಆಫ್! ಎನ್ನ ಕ್ಲೋಸ್ ಫ್ರೆಂಡ್ಸುಗಕ್ಕೆ ಅದು ಗೊಂತಕ್ಕು. ಆದರೆ ಕಾರಣ ಎಂತರ ಹೇಳಿ ಗೊಂತಾಗ.

ನಿನ್ನ, ಎನ್ನ ಕಾಲೇಜು ಬೇರೆ ಬೇರೆ ಆಗಿದ್ದರೂ, ಉಪ್ಪಿನಂಗಡಿಂದ ಪುತ್ತೂರಿನವರೆಗೆ ಹೋಯೆಕ್ಕಿದಾ. ದಿನಾಗಳು ನಿನ್ನ ನೋಡದ್ರೆ ಮನಸ್ಸಿಂಗೆ ಸಮಾಧಾನ ಆಗಿಯೊಂಡಿತ್ತಿಲ್ಲೆ. ಉದಿಯಪ್ಪಗ ಆನು ಉಪ್ಪಿನಂಗಡಿಗೆ ಬೇಗ ಬಂದು ನಿನ್ನ ಆಗಮನವ ಕಾದು, ನಂತರ ನೀನು ಹತ್ತಿದ ಬಸ್ಸಿಲ್ಲಿ ಆನುದೆ ಹತ್ತಿಗೊಂಡು ಇತ್ತಿದೆ. ಆ ಬಸ್ಸುದೆ ಹಾಂಗೆ ರಷ್ಷೂ ಹೇಳಿದರೆ ರಷ್. ಒಪ್ಪಣ್ಣನ ಮನೆಯ ಹೊಡೆಂಗೆ ಹೋವ್ತ ಕಾರಿನಾಂಗೆ! ಎಲ್ಲರೂ ಹತ್ತಲೆ ಅರ್ಜೆಂಟು ಮಾಡುಗು. ನೀನುದೆ. ನೀನು ಓಡಿ ಹೋಗಿ ಹಿಂದೆ ಇಪ್ಪ ಸೀಟಿಲ್ಲಿ ಕಿಟಿಕಿ ಹತ್ತರೆ ಕೂಬೆ. ಬಸ್ಸಿಂಗೆ ಎಲ್ಲರೂ ಹತ್ತಿದ ನಂತರ ಆನು ಹತ್ತುವೆ. ಸೀಟಿಲ್ಲಿ ಕೂಬಲೆ ಆಸೆ ಇಲ್ಲದ್ದೇ ಅಲ್ಲ. ನಿನ್ನ ನೋಡ್ಳೆ! ಬಸ್ಸಿಲ್ಲಿ ದಿನಾಗಳು ಒರಗುವ ನಿನ್ನ ನೋಡಿ ಮನಸ್ಸಿಲ್ಲೆ ನೆಗೆಮಾಡಿಗೊಂಡು ಇತ್ತಿದೆ. ಆ ಅರ್ಧ/ಮುಕ್ಕಾಲು ಗಂಟೆ ಹೇಂಗೆ ಕಳಕ್ಕೊಂಡಿತ್ತು ಹೇಳುದೇ ಗೊಂತಾಗಿಯೊಂಡು ಇತ್ತಿಲ್ಲೆ.

ನಿನ್ನ ಕಾಲೇಜು ನಗರಲ್ಲಿ ಇಪ್ಪದರಿಂದ ನೀನು ಬೊಳುವಾರಿಲ್ಲಿ ಇಳಿಯೆಕ್ಕಿತ್ತು. ಎನ್ನ ಕಾಲೇಜು ದರ್ಬೆ ಹತ್ತರೆ ಇದ್ದ ಕಾರಣ ಪುತ್ತೂರು ಬಸ್‌ಸ್ಟೇಂಡ್‌ಗೆ ಹೋಗದ್ದೆ ಉಪಾಯ ಇಲ್ಲೆ. ನಿಂಗೊಗೆ ಸ್ಪೆಷಲ್ ಕ್ಯಾಸುಗ, ಲ್ಯಾಬ್‌ಗೊ ಹೇಳಿ ಉದಿಯಿಂದ ಹೊತ್ತೊಪ್ಪಗವರೆಗೆ ಕ್ಲಾಸುಗ. ಎಂಗೊಗೆ ಮಧ್ಯಾಹ್ನಕ್ಕೆ ಮುಗಿತ್ತು. ಜಾಸ್ತಿ ಹೇಳಿದರೆ ಮಧ್ಯಾಂತರಿಗೆ ಒಂದು ಪಿರೇಡ್ ಇಕ್ಕು. ಕಸ್ತಲಪ್ಪಗ ನೀನು ಎಷ್ಟೊಂತ್ತಿಗೆ ಕಾಲೇಜಿಂದ ಹೆರಡುತ್ತೆ ಹೇಳುದೇ ಎನಗೆ ಗೊಂತಾಗ. ಮಧ್ಯಾಹ್ನ ಕ್ಲಾಸು ಮುಗಿಸಿ ಕಸ್ತಲೆವರೆಗೆ ಆನು ಕಾಲೇಜಿಲಿ ಕೂಬಲೇ ಸಾಧ್ಯವಿತ್ತಿಲ್ಲೆ. ಹಾಂಗಾಗಿ ಆನು ಪ್ರತಿದಿನ ಉದಿಯಪ್ಪಗಳೇ ನಿನ್ನ ಕಾಣೆಕ್ಕಿತ್ತು.

ಆ ಮೂರು ವರ್ಷಗಳ ಅವಧಿಯಲ್ಲಿ ನಿನ್ನ ಕಾಣದ್ದೆ ಇದ್ದ ದಿನ ಬಹಳ ಕಮ್ಮಿ. ನಿನ್ನ ಹತ್ತರೆ ಹೋಪಗ ನಿನ್ನ ಆನು ನೋಡಿಯೊಂಡು ಇತ್ತೆಯಾದರೂ ನೀನು ಎನ್ನ ಗಮನಿಸಿಕೊಂಡು ಇತ್ತಿಲ್ಲೆ. (ಆನು ತುಂಬಾ ಚೆಂದ ಇಲ್ಲೆ ಹೇಳ್ತದು ಅದಕ್ಕೆ ಕಾರಣ ಆದಿಕ್ಕು) ನಿನ್ನತ್ರೆ ಮಾತಾಡೆಕ್ಕು ಹೇಳಿ ಹಲವು ಸರ್ತಿ ಗ್ರೇಶಿದರೂ ಏಕೋ ಏನೋ ಎಂತ ಮಾಡಿದರು ಮನಸ್ಸು ಮಾತ್ರ ಬೇಡ ಹೇಳಿಗೊಂಡು ಇತ್ತು. ಂಗೆ ದಿನ ಕಳಕ್ಕೊಂಡೆ ಇತ್ತು… ಒಟ್ಟಿಂಗೆ ನಮ್ಮ ಪರೀಕ್ಷೆಗಳು, ಕಾಲೇಜು ಜೀವನವೂ ಮುಗಿಕ್ಕೊಂಡು ಬಂತು. ಅಕೇರಿಗಪ್ಪಗ ಎನ್ನ ಫ್ರೆಂಡ್ಸುಗವಕ್ಕೆ ಈ ವಿಷಯ ಗೊಂತಾತು. ಅವು ಎನ್ನ ನೆಗೆ ಮಾಡ್ಳೆ ಸುರುಮಾಡಿದವು. ನೀನು ಅವನ ಲವ್ ಮಾಡುತ್ತಾ ಇದ್ದೆ ಹೇಳಿ. ಆದರೆ ಅಂತ ಭಾವನೆ ಎನಗೆ ಇತ್ತಿಲ್ಲೆ. ಎನ್ನ ಈ ವಿಚಿತ್ರ ಸ್ನೇಹ ಭಾವನೆಗಳ ತೊಳಲಾಟ ಕಾಂಬಗ ಅವಕ್ಕೆ ಹಾಂಗನಿಸಿದ್ದರಲ್ಲಿ ತಪ್ಪೇನಿಲ್ಲೆ.

ಅಷ್ಟೊಂತಿಗಾಗಲೇ ನಮ್ಮ ಪದವಿ ಕಾಲೇಜಿನ ಜೀವನ ಮುಗಿದತ್ತು. ನಿನ್ನ ಮಿಸ್ ಮಾಡಿಕೊಳ್ಳತ್ತಾ ಇದ್ದನ್ನೆ ಹೇಳ್ತ ಬೇಜಾರು ಆತಾದರೂ, ಜೀವನದ ಹಲವು ಸತ್ಯಂಗಳ ನಾವು ಒಪ್ಪಿಕೊಳ್ಳಲೇ ಬೇಕಲ್ಲದಾ…ಹಾಂಗಾಗಿ ಬೇಜಾರವ ಸಹಿಸಿಕೊಂಡೆ, ಆನು ಎನ್ನ ಮುಂದಿನ ಜೀವನದ (ಉನ್ನತ ಶಿಕ್ಷಣ, ವೈವಾಹಿಕ) ಬಗ್ಗೆ ಆಲೋಚನೆ ಮಾಡ್ಳೆ ಶುರುಮಾಡಿದೆ. ಮನೆಲಿ ಕೂಡ ಅಪ್ಪ ಅಮ್ಮ ಕೂಡ ಅದೇ ವಿಚಾರಂಗಳ ಎನ್ನಂದ ಜಾಸ್ತಿ ಆಲೋಚನೆ ಮಾಡ್ತಾ ಇತ್ತಿತವು. ನೀನು ಕೋಣಾಜೆ ವಿಶ್ವವಿದ್ಯಾಲಯ ಸೇರಿದೆ ಹೇಳಿ ಎನಗೆ ಗೊಂತಾತು… ಒಬ್ಬ ಕ್ಲೋಸ್ ಫ್ರೆಂಡ್ ದೂರಲ್ಲಿ ಇದ್ದುಕೊಂಡು ಎಂತ ಮಾಡ್ಳೆ ಎಡಿಗೋ.. ಅದನ್ನೇ ಆನೂ ಮಾಡಿದೆ. ನಿನ್ನ ಉತ್ತಮ ಭವಿಷ್ಯದ, ವೃತ್ತಿ ಜೀವನನದ ಬಗ್ಗೆ ದೇವರಲ್ಲಿ ಮನಸಾರೆ ಪ್ರಾರ್ಥಿಸಿದೆ.

ಅಲ್ಲಿಂದ ಸುದೀರ್ಘ ಐದು ವರ್ಷಗಳ ಅವಧಿಯಲ್ಲಿ ನಿನ್ನ ಬಗ್ಗೆ ಪ್ರತಿದಿನ ಆಲೋಚನೆ ಮಾಡ್ಳೆ ಸಮಯ ಸಿಕ್ಕಿದ್ದಿಲ್ಲೆ. ಅದಕ್ಕೆ ಕಾರಣಂಗಳೂ ಇಲ್ಲದ್ದಿಲ್ಲೆ. ಒಂದೊಂದರಿ ನೆಂಪು ಬಪ್ಪಗ ಎನ್ನ (ನಿನ್ನ) ಕಾಲೇಜು ಜೀವನ, ಉಪ್ಪಿನಂಗಡಿ ಬಸ್ ಸ್ಟೇಂಡ್, ಪುತ್ತೂರು ಬಸ್.. ಹೀಂಗೆ ಎಲ್ಲವನ್ನು ಗ್ರೇಶುವಾಗ ಮನಸಿಂಗೆ ಹಿತ ಅನ್ನಿಸಿಕೊಂಡಿತ್ತು.

ಹೋಗಲಿ.. ಬಹು ವರ್ಷದ ನಂತರ ಕಳೆದ ತಿಂಗಳು ನಮ್ಮ ಮಾಷ್ಟ್ರುಮಾವನ ಮಗನ ಮದುವೆಯಿಲಿ ಕಂಡೆ. ಆಶ್ಚರ್ಯ ಆತು ಅದೆಷ್ಟು ಬದಲಾವಣೆ ಆಯ್ದೆ ಮಾರಾಯ ನೀನು. ಆ ಮಾಣಿ ನೀನೆಯಾ ಹೇಳಿ ಆತು ಅನಿಸಿಹೋತು. ದೈಹಿಕವಾಗಿ ಮತ್ತೂ ತೋರ ಆದರೂ, ನೀನು ಮಾತಾಡುವ ಶೈಲಿ, ನಿನ್ನ ನೆಗೆ ಒಂದೂ ಬದಲಾಯಿದಿಲ್ಲೆ. ಆದರೂ ಆನು ಬದಲಾದಷ್ಟು ನೀನು ಬದಲಾಗಿತ್ತಿಲ್ಲೆ. (ಇಲ್ಲಿ ವಿವರಣೆ ಅಗತ್ಯ ಇಲ್ಲೆ ಹೇಳಿ ಎನಗೆ ಕಾಣ್ತು) ನಿಂಗ ಬೈಲಿನವೆಲ್ಲಾ ಒಟ್ಟಿಂಗೆ ನಿಂದು ಹರಟೆ ಹೊಡಕ್ಕೊಂಡು ಇಪ್ಪದರ, ಯೇನಂಕೂಡ್ಳಣ್ಣ, ಹಳೆಮನೆ ಅಣ್ಣ ನಿಂಗಳ ಪಟತೆಗದವರ ನೋಡಿಗೊಂಡು ಕೂದೆ. ಮಧ್ಯಾಹ್ನ ಆದ್ದೇ ಗೊಂತಾಯಿದಿಲ್ಲ. ಆನೆಂತ ಪೆದ್ದು ಹೇಳಿ ನೋಡು… ಅಂದೂ ಕೂಡ ನಿನ್ನ ಮಾತಾಡ್ಸಲೆ ಎನಗೆ ಮನಸ್ಸು ಬೈಂಯಿದಿಲ್ಲೆ. ಮಧ್ಯಾಹ್ನ ನೀನು, ಗಣೇಶಮಾವ, ಅಜ್ಜಕಾನ ಭಾವ ಎಲ್ಲ ಒಟ್ಟಿಂಗ ಹಂತಿಲಿ ಕೂಬಲೆ ರೆಡಿಯಾದಪ್ಪಾಗದರೂ ನಿಂಗಳ ಹತ್ತರೆ ನಿಂದುಕೊಂಡಿದ್ದ ಎನಗೆ ಮಾತಾಡ್ಳೆ ಅವಕಾಶ ಇತ್ತು. ಅಂಬಗಳೂ ಮಾತಾಡ್ಳೆ ಆತಿಲ್ಲೆ (ಎನಗೆ ಬೇಡಾಳಿ ಕಂಡತ್ತು). ನಿಂಗ ಕೂದ ಎದುರಾಣ ಹಂತಿಲಿ ಆನಿತ್ತೆ…. ಅದೇ ಹಂತಿಲಿ ಮದುಮಕ್ಕಳುದೇ ಇತ್ತಿತವು! ಎನ್ನ ಹತ್ತರೆ ಕೂದ್ದದು ನಮ್ಮ ಮಂಗ್ಳೂರಕ್ಕ.

ನೀನು ಯೂನಿವರ್ಸಿಟಿಲಿ ಎಂತರ ಕಲ್ತದು, ಈಗ ಎಂತ ಮಾಡಿಗೊಂಡು ಇದ್ದೆ ಹೇಳ್ತದು ಎನಗೆ ಗೊಂತಿತ್ತಿಲ್ಲೆ. ಅಕ್ಕನತ್ರೆ ಹೀಂಗೆ ನಿಂಗಳ ಬೈಲಿನ, ನೆರೆಕರೆಯವರ ವಿಚಾರಂಗಳ ಎಲ್ಲಾ ಕೆದಕಿದೆ. ಅದರೊಟ್ಟಿಂಗೆ ನಿನ್ನ ವಿಚಾರವೂ ಬಂತನ್ನೆ. ನೀನೀಗ ಒಳ್ಳೆ ಕೆಲಸಲ್ಲಿದ್ದೆ ಹೇಳಿ ಅಕ್ಕ ಹೇಳಿತ್ತು ಒಟ್ಟಿಂಗೆ ನಿನ್ನ ಎಡ್ರಸ್ಸು ಕೊಟ್ಟತ್ತು. ಎನಗೆ ಎಷ್ಟು ಕೊಶಿಯಾತು ಹೇಳಿ ಗೊಂತಿದ್ದಾ… ಆನು ದೇವರತ್ರೆ ಮಾಡಿದ ಪ್ರಾರ್ಥನೆ ಸಾರ್ಥಕ ಆತು ಹೇಳಿ ಮನಸ್ಸಿಲ್ಲೇ ಗ್ರೇಶಿದೆ. ನಿನ್ನ ಅನಿರೀಕ್ಷೀತ ಭೇಟಿ ತುಂಬಾ ಕೊಶಿ ಕೊಟ್ಟತ್ತು. ಮಾಷ್ಟ್ರುಮಾವನ ಮಗಂಗೆ ಮನಸ್ಸಿಲ್ಲೆ ಒಂದು ಕೃತಜ್ಞತೆ ಹೇಳಿದೆ. ಅವ ಮದುವೆ ಆದ್ದಕ್ಕೆ ನಿನ್ನ ಮತ್ತೆ ಕಾಂಬಲೆ ಸಿಕ್ಕಿತ್ತಿದಾ!

ಕಾಗದ ತುಂಬಾ ದೊಡ್ಡ ಆತಲ್ಲದಾ.. ಪೆಂಗಣ್ಣನಷ್ಟು ಸಣ್ಣಕೆ ಕಾಗದ/ಸುದ್ದಿಯ ಬರವಲೆ ಎನಗೆ ಅರಡಿತ್ತಿಲ್ಲೆ!!! ಕ್ಷಮಿಸು.. ಇನ್ನು ತುಂಬ ಬರತ್ತಿಲ್ಲೆ ಒಂದೇ ಒಂದೇ ಗೆರೆ…
ನಿನ್ನ ಭವಿಷ್ಯ ಉತ್ತಮ ಆಗಿರಲಿ ಹೇಳ್ತದೆ ಎನ್ನ ಹಾರೈಕೆ.
ಇತಿ ನಿನ್ನ ಅನಾಮಿಕ ಆತ್ಮೀಯಳು…

ಮತ್ತೆ ಪುನಃ ಟಕ್ ಟಕ್… ಹೇಳಿ ಬಾಗಿಲು ಬಡಿದ ಶಬ್ದ ಆತು. ಕಣ್ಣು ಬಿಟ್ಟು ನೋಡ್ತೆ ಆನು ಹಾಸಿಗೆಲಿ! ಉದಿಯಪ್ಪಗ ಆರು ಗಂಟೆ. ’ಸಾರ್ ಪೇಪರ್’ ಹೇಳಿ ಪೇಪರ್ ಮಾರುವ ಹುಡುಗ ಹೇಳಿದ. ಯಾವಗಳು ಆನು ೫.೩೦ಗೆ ಏಳುವವ. ಆದಿನ ಆದಿತ್ಯವಾರ. ಹಾಂಗಾಗಿ ರಜ್ಜ ಲೇಟು. ಅಂತು ಒಳ್ಳೆ ಕನಸಿನ ಕಾಗದ ಓದಿದ ಖುಷಿಲಿ ಪೇಪರು ಓದಲೆ ಸುರು ಮಾಡಿದೆ. ಸುದ್ದಿಗಳ ಓದಿ ಸಾಪ್ತಾಹಿಕ ಪುರವಣಿ ಓದುವ ಕ್ರಮ ಎನ್ನದು. ಅದರಲ್ಲೂ ಆದಿತ್ಯವಾರ ವಾರಭವಿಷ್ಯ ಇರ‍್ತಿದಾ… ಹಾಂಗೆ ಆದಿನವೂ ಎನ್ನ ರಾಶಿಯ ಮೇಲೆ ಕಣ್ಣಾಡಿಸಿದೆ.

ಅದರಲ್ಲಿ ಹೀಂಗೆ ಬರದಿತ್ತು…
ಆತ್ಮೀಯರೊಬ್ಬರ ಪತ್ರ ಈ ವಾರ ನಿಮ್ಮ ಕೈ ಸೇರಲಿದೆ!!!!

ಕೊನೆ ಮಾತು: ಉದೆಗಾಲಕ್ಕೆ ಕಂಡ ಕನಸು ನಿಜ ಆವುತ್ತಡಾ…ಬಟ್ಟಮಾವ° ಹೇಳುಗು. ಉಮ್ಮಪ್ಪ ಎನಗರಡಿಯ…

Wednesday, July 14, 2010

ಅಮೆರಿಕದ ಸಮುದ್ರಲ್ಲಿ ಎಣ್ಣೆ ಸೋರುತ್ತ ಸುದ್ದಿ…

ಕೊಳಚಿಪ್ಪು ಬಾವ ಭೋಪಾಲ ಗೇಸು ದುರಂತದ ಬಗ್ಗೆ ಬರದ್ದು ನಿಂಗೆಲ್ಲಾ ಓದಿದ್ದಿ. ಒಂದೊಳ್ಳೆ ಅರ್ಥ ಪೂರ್ಣ, ಸಕಾಲಿಕ ಲೇಖನ ಅದಾಗಿತ್ತು.

ಭಾರತದಲ್ಲಿ ನಡೆದ ಅತ್ಯಂತ ಕೆಟ್ಟ ಆಪತ್ತು ಹೇಳ್ತ ಕುಖ್ಯಾತಿ ಅದಕ್ಕಿದ್ದು. ಇರಲಿ.
ಆನುದೆ ಬರವಲೆ ಹೆರಟದು ಹೀಂಗೆಯೇ ಪರಿಸರಕ್ಕೆ ಆದ ವಿಪತ್ತಿನ ಬಗ್ಗೆಯೇ ಆದರೆ ಅದು ಭಾರತದ್ದಲ್ಲ. ಅಮೆರಿಕದ ಸುದ್ದಿ.

ಕಳೆದ ಎರಡು ತಿಂಗಳಿಂದ ನಿಂಗೊ ಪೇಪರಿಲ್ಲಿಯೋ, ಟಿವಿಲೀ ಓದಿಪ್ಪಿ ಕೇಳಿಪ್ಪಿ.
ಅಮೆರಿಕದ ಸಮುದ್ರದ ಅಡಿಯಲ್ಲಿ ಎಣ್ಣೆ ಸೋರುತ್ತಾ ಇದ್ದು ಹೇಳ್ತ ಸುದ್ದಿಯ. ಆದರೆ ಬಹುಪಾಲು ಜೆನಕ್ಕೆ ಇದರ ವಿಷಯ ಎಂತರ ಹೇಳಿ ಗೊಂತಿಲ್ಲೆ (ಶರ್ಮಪ್ಪಚ್ಚಿಗೆ ಗೊಂತಿಕ್ಕು) ಅದರ ವಿವರಿಸುವ ಸಣ್ಣ ಪ್ರಯತ್ನ ಎನ್ನದು.

ವಿಜ್ಞಾನ ಪೇಪರಿನ ವಿಭಾಗಲ್ಲಿ (ವಿಜ್ಞಾನ ಪತ್ರಿಕೋದ್ಯಮ) ಭಾರಿ ಕೃಷಿ ಮಾಡಿದ ನಾಗೇಶ ಹೆಗಡೆ ಹೇಳ್ತ ಹಿರಿಯ ವೆಕ್ತಿ, ಪ್ರಜಾವಾಣಿ ಪೇಪರಿಲ್ಲಿ ’ವಿಜ್ಞಾನ ವಿಶೇಷ’ ಹೇಳ್ತ ಅಂಕಣ ಬರವದು ನಿಂಗೊಗೆ ಗೊಂತಿಕ್ಕು.
ಅಥವಾ ಅದರ ನಿಂಗಳುದೆ ಓದಿಪ್ಪಿ. ಅವು ಎಣ್ಣೆ ಸೋರುತ್ತದರ ಬಗ್ಗೆ ಅವರ ಲೇಖನಲ್ಲಿ ಪ್ರಸ್ತಾಪಿಸಿದ್ದವು. ಅವು ಕನ್ನಡಲ್ಲಿ ಬರದ್ದರ ಆನು ನಮ್ಮ ಭಾಷೆಲಿ ಬರತ್ತಾ ಇದ್ದೆ. ಅವರ ಲೇಖನ ಅಲ್ಲದ್ದೆ ಆನು ಓದಿಪ್ಪ ಇತರ ಪೂರಕ ಮಾಹಿತಿಗಳನ್ನು ಇಲ್ಲಿ ಬರದ್ದೆ…

ಸಾಮಾನ್ಯವಾಗಿ ನಾವು ನೀರಿಂಗೆ ಬೋರು ತೆಗೆತ್ತಾ ರೀತಿಲಿಯೇ ಎಣ್ಣೆ (ಕಚ್ಚಾ ತೈಲ ಹೇಳ್ತವು)ಗೂ ಬೋರು ತೋಡುದು ಪದ್ಧತಿ. ಹೀಂಗೆ ನೆಲದ ಮೇಲೆ ಬೋರು ತೆಗೆತ್ತಾ ಇಪ್ಪಗ ಭೂಮಿ ಅಡಿಂದ ಎಣ್ಣೆ ಒಂದೇ ಸರ್ತಿಹೆರ ಬಂದು ತಿಂಗಳು ಗಟ್ಟಲೆ ಕಾರಂಜಿಯ ಹಾಂಗೆ ಎಣ್ಣೆ ರಟ್ಟುವ ಕ್ರಮ ಇದ್ದು. ಒಂದರಿ ಅದು ಕಾರಂಜಿ ಹಾಂಗೆ ಚಿಮ್ಮಲೆ ಸುರುವಾದರೆ ಅದರ ನಿಲ್ಲುಸಲೆ ಎಡಿಗಾವುತ್ತಿಲ್ಲೆ. ಅದಕ್ಕಾಗಿ ಬೋರು ಕೊರವಲೆ ಸುರುಮಾಡುವಾಗಲೇ ಅತ್ಯಂತ ಗಟ್ಟಿ ಕವಾಟುಗ ಇಪ್ಪ ಗೋಪುರವ ಕಟ್ಟಿ ಅದರ ಮೂಲಕ ಡ್ರಿಲ್ಲಿಂಗ್ (ಬೋರು ಕೊರವ) ಮಿಷನ್ನಿನ ಇಳುಸುತ್ತವು.

ಭೂಮಿಯ ಮೇಲೆಯೇ ಇಷ್ಟು ಕಷ್ಟ ಇಪ್ಪಗ, ಸಮುದ್ರದಲ್ಲಿ ಪರಿಸ್ಥಿತಿ ಹೇಂಗಿಕ್ಕು ಹೇಳ್ತದು ನಿಂಗಳ ಮನಸ್ಸಿಲ್ಲಿ ಬಂದಿಕ್ಕು.
ನಿಂಗಳ ಊಹೆ ಸರಿ, ಸಮುದ್ರದ ಒಳದಿಕ್ಕೆ ಎಣ್ಣೆಯ ಬೋರು ಕೊರವದು ಇನ್ನೂ ಕಷ್ಟ. ಹಾಂಗಿಪ್ಪ ಗೋಪುರವ ಸಮುದ್ರದ ಅಡಿಂಗೆ ಇಳಿಸಿ, ಸಮುದ್ರದ ನೀರಿಲ್ಲಿ ತೆಪ್ಪ (ತೇಲುಕಟ್ಟೆ ಹೇಳ್ತವು) ನಿರ್ಮಿಸಿ ಅಲ್ಲಿಂದ ಈ ಗೋಪುರದ ಮೂಲಕ ಬೋರ್ ಕೊರೆಕು.
ಬೋರು ಕೊರತ್ತಾ ಇಪ್ಪಗ ಎಣ್ಣೆ (ಕಚ್ಚಾ ತೈಲ) ರಟ್ಟಿದ ಕೂಡ್ಲೆ, ಅದು ಗೋಪುರ ಕವಾಟಿಂದಾಗಿ ಬಂದು ಅದರ ಮೇಲಿಪ್ಪ ಒತ್ತಡವ ಕಡಮ್ಮೆ ಮಾಡಿಕೊಂಡು ಪೈಪ್ಪಿನ ಮೂಲಕ ಸಮುದ್ರದ ಮೇಲಿಪ್ಪ ತೆಪ್ಪಕ್ಕೆ ಬಂದು ಅಲ್ಲಿಂದ ಎಣ್ಣೆ ಸಮುದ್ರದ ದಂಡೆಗೆ ಬಪ್ಪದು ಕ್ರಮ.

ಅಮೆರಿಕದ ದಕ್ಷಿಣ ಕರಾವಳಿಂದ(ಮೆಕ್ಸಿಕೊ ಕೊಲ್ಲಿಲಿ) ೬೫ ಕಿ.ಮೀ ದೂರಲ್ಲಿ, ಇಂಗ್ಲೆಂಡಿನ ಬಿಪಿ ಕಂಪೆನಿ ಹೀಂಗೆ ಸಮುದ್ರದ ಅಡಿಲಿಪ್ಪ ಎಣ್ಣೆ (ಕಚ್ಚಾ)ತೆಗೆತ್ತಾ ಇತ್ತು. ಏಪ್ರಿಲ್ ತಿಂಗಳ ೨೦ರಂದು ಆರುದೆ ಊಹಿಸದ್ದ ಅನಾಹುತ ಒಂದು ಅಲ್ಲಿ ಆಗಿ ಹೋತು.
ಸಮುದ್ರದ ಮೇಲೆ ಇಪ್ಪ ತೆಪ್ಪಲ್ಲಿ ಸ್ಫೋಟ ಆಗಿ ಅಲ್ಲಿ ಕೆಲಸ ಮಾಡಿಗೊಂಡಿದ್ದ ಹನ್ನೊಂದು ಜೆನಂಗ ಸತ್ತವು. ಇಷ್ಟೇ ಆಗಿದ್ದರೆ ಸಮಸ್ಯೆ ಏನೂ ಇತ್ತಿಲ್ಲೆ. ಆ ಸ್ಪೋಟಂದಾಗಿ ಆದರೆ ಸಮುದ್ರ ಒಳ ಇದ್ದ ಕವಾಟಿನ ಗೋಪುರ ಒಡದು ಹೋತು.
ಅಷ್ಟೆ ಅಲ್ಲ ಎಣ್ಣೆ ಬಂದುಗೊಂಡಿದ್ದ ಪೈಪುದೆ ಒಡದತ್ತು. ಅಂಬಗ ಸುರು ಆತದಾ ಎಣ್ಣೆ ಸೋರುಲೆ. ಅಂದು ಸುರುವಾದ ಸೋರಿಕೆ ಇಂದಿಂಗೂ ನಿಂದಿದಿಲ್ಲೆ. ನೀರಾಗಿದ್ದರೆ ತೊಂದರೆ ಇತ್ತಿಲ್ಲೆ. ಸಮುದ್ರದ ನೀರುದೆ, ಬೋರಿನ ನೀರುದೆ ಮಿಕ್ಸ್ ಆಗಿದ್ದರುದೆ ಯಾವುದೇ ಸಮಸ್ಯೆ ಇತ್ತಿಲ್ಲೆ. ಇದು ಎಣ್ಣೆ ಇದಾ ಅದು ನೀರಿನೊಟ್ಟಿಂಗೆ ಮಿಕ್ಸ್ ಆವುತ್ತಿಲ್ಲನ್ನೆ, ಬಸ ಬಸ ಹೇಳಿ ಬೋರಿಂದ ಹೆರ ಬತ್ತಾ ಇಪ್ಪ ಕಚ್ಚಾ ಎಣ್ಣೆ ಸಮುದ್ರಲ್ಲೆಲ್ಲಾ ಹರಡುತ್ತಾ ಇದ್ದು.

ಎಣ್ಣೆ ಸಾಗುಸುವ ಹಡಗು ಮಣ್ಣ ಒಡೆದರೆ ಅದರಿಂದ ಅಪ್ಪ ನಷ್ಟವೋ ಯಾ ಅನಾಹುತ ಎಷ್ಟು ಹೇಳಿ ಹೇಳ್ಳಕ್ಕು. ಆದರೆ ಇಲ್ಲಿ ಹಾಂಗೆ ಹೇಳ್ಳೆ ಎಡಿಯ. ಭೂಗರ್ಭಲ್ಲಿ ಇಪ್ಪ ಎಣ್ಣೆಯ ನಿಕ್ಷೇಪ ಖಾಲಿ ಅಪ್ಪನ್ನಾರಕುದೆ ಎಣ್ಣೆ ಬತ್ತಾ ಇಕ್ಕು, ಒಂದು ವೇಳೆ ನಾವು ಅದರ ತಡೆಯದ್ದೇ ಇದ್ದರೆ. ಕಳೆದ ಸುಮಾರು ಎರಡೂವರೆ ತಿಂಗಳಿಂದ ಎಣ್ಣೆ ನಿರಂತರವಾಗಿ ಸಮುದ್ರಕ್ಕೆ ಸೇರುತ್ತಾ ಇದ್ದು. ದಿನವೊಂದಕ್ಕೆ ೨೦,೦೦೦ ಬ್ಯಾರೆಲಿಂದ ೪೦,೦೦೦ ಬ್ಯಾರೆಲ್‌ವರೆಗೆ ಎಣ್ಣೆ ಸೋರುತ್ತಾ ಇದ್ದು ಹೇಳಿ ವಿಜ್ಞಾನಿಗೊ ಲೆಕ್ಕ ಹಾಕಿದ್ದವು.
ಎಣ್ಣೆಯ ಕೆಸರಿನಿಂದಾಗಿ ಅಮೆರಿಕದ ಲ್ಯೂಸಿಯಾನ, ಮಿಸ್ಸಿಸಿಪ್ಪಿ, ಅಲಬಾಮಾ, ಫ್ಲಾರಿಡಾ ಪ್ರದೇಶಂಗಳಲ್ಲಿ ಆತಂಕ ಸೃಷ್ಟಿಯಾಯಿದು.

ಎಣ್ಣೆಯ ಜಿಡ್ಡು ಹಿಡಿದು ಲೆಕ್ಕ ಇಲ್ಲದಷ್ಟು ಜೀವಚರಂಗ ಸತ್ತಿದು. ಅಪರೂಪವಾದ ಕಡಲಾಮೆ, ಪಕ್ಷಿಗೊ, ಡಾಲ್ಫಿನ್‌ಗ ಹೀಂಗೆ ಪಟ್ಟಿ ಬೆಳೆತ್ತಾ ಹೋವ್ತು. ಪ್ರವಾಸದ ಉದ್ಯಮಕ್ಕೆ (ಟೂರಿಸಂ) ಭಾರಿ ಪೆಟ್ಟು ಬಿದ್ದಿದು.
ಅಲ್ಯಾಣವಕ್ಕೆ ಪೈಸೆ ಅಪ್ಪದೇ ಅದರಿಂದಿದಾ.. ಹಾಂಗಾಗಿ ಇನ್ನೂ ರಜ್ಜ ಕಷ್ಟ. ಹೋಟ್ಳುಗವಕ್ಕೂ ಬಿಸುನೆಸ್ ಇಲ್ಲೆ. ಬಿಪಿ ಕಂಪೆನಿಯ ವಿರುದ್ಧ, ಅಮೆರಿಕದ ಸರ್ಕಾರದ ವಿರುದ್ಧ ಪರಿಸರವಾದಿಗ, ಜನಂಗ ಪ್ರತಿಭಟನೆ ಮಾಡ್ತಾ ಇದ್ದವು.

ಇದೆಲ್ಲದರ ನಡುವೆ ಎಣ್ಣೆ ಸೋರ್ತದರ ಬಂದು ಮಾಡುವ ಪ್ರಯತ್ನ ಸಾಗಿದ್ದು. ಇದರ ಒಟ್ಟೋಟ್ಟಿಂಗೆ ಇಷ್ಟರವರೆಗೆ ಸೋರಿದ ಎಣ್ಣೆಯಿಂದ ಅಪ್ಪ ಪರಿಣಾಮಗಳ ತಡವ ಯತ್ನವುದೇ ಸಾಗಿದ್ದು. ಈ ಪ್ರದೇಶದ ಮೂವತ್ತು ಸಾವಿರ ಚದರ ಕಿಲೊಮೀಟರ್ ಸುತ್ತ ಹಡಗುಗಳ ಸಂಚಾರ ತಡದ್ದು, ಮೀನು ಹಿಡುವಲಾಗ ಹೇಳ್ತ ಓರ್ಡರುದೆ ಪಾಸಾಯಿದು. ಅಲ್ಲಿ ಮನೆ ಮಾಡಿಗೊಂಡಿದ್ದವರ ಒಕ್ಕಲೆಬ್ಬಿಸಿದ್ದವು.

ಆಧುನಿಕ ಮನುಷ್ಯ ಮಾಡಿದ ಎಲ್ಲಾ ಯಂತ್ರಂಗೊ, ಸಾಧನೊಂಗ, ಎಣ್ಣೆ ಸೋರ‍್ತದರ ತಡವ ಪ್ರಯತ್ನ ಮಾಡ್ತಾ ಇದ್ದವು. ವಿಮಾನಂಗೊ, ಉಪಗ್ರಹಂಗೊ ಎಲ್ಲವುದೇ ಸಮುದ್ರಲ್ಲಿ ಎಣ್ಣೆಯ ಜಿಡ್ಡು ಹರಡುತ್ತ ಪ್ರಮಾಣವ ಅಳತ್ತಾ ಇದ್ದವು. ಹವಾಮಾನ ವಿಜ್ಞಾನಿಗೊ ಪ್ರತಿ ಕ್ಷಣದೆ ವರದಿ ಕೊಡುತ್ತಾ ಇದ್ದವು. ಜಿಡ್ಡು ಸಮುದ್ರದ ಕರೆಂಗೆ ಬಾರದ್ದ ಹಾಂಗೆ ತಿಳುದವರ ಟೀಮು ತಡೆಗಟ್ಟೆ ಕಟ್ಟುತ್ತಾ ಇದ್ದವು. ಎಣ್ಣೆ ಮೈಗೆ ಹಿಡಿದ ಪ್ರಾಣಿಗಳ ಪಕ್ಷಿಗಳ ಮೀಷುಲೆ ಪ್ರತ್ಯೇಕ ವ್ಯೆವಸ್ಥೆ ಮಾಡಿದ್ದವು. ಸಮುದ್ರದ ನೀರಿನ ಕ್ಲೀನು ಮಾಡ್ಲೆ ಹೆಲಿಕಾಪ್ಟರ್‌ಗ, ವಿಮಾನಂಗ ಆಕಾಶದಿಂದ ಮದ್ದು ಬಿಡ್ತಾ ಇದ್ದವು. (ರಬ್ಬರಿಂಗೆ ಹೆಲಿಕಾಪ್ಟರಿಲ್ಲಿ ಮದ್ದು ಬಿಡ್ತಾ ಹಾಂಗೆ).
ಇದು ನೀರಿನ ಮೇಲಾಣ ಕಥೆ ಆತು.

ಸಮುದ್ರದ ಅಡಿಲಿಪ್ಪ ಕಥೆ ಇನ್ನೂ ಜೋರಿನದ್ದು. ಸೋರುತ್ತ ಇಪ್ಪ ಎಣ್ಣೆಯ ಬೋರ್‌ವೆಲ್‌ನ ಬಾಯಿಗೆ ಮುಚ್ಚಲು ಹಾಯೆಕ್ಕನ್ನೆ.
(ಎರಡಿಂಚಿನ ಪೈಂಪಿಂಗೆ ಕ್ಯಾಪು ಹಾಕದರ ನೆಂಪುಮಾಡಿಗೊಳ್ಳಿ!) ನಾಗೇಶ ಹೆಗಡೆ ಬರತ್ತವು.. ಅಲ್ಲೊಂದು ಮಿನಿ ಯುದ್ಧಭೂಮಿಯೇ ನಿರ್ಮಾಣ ಆಯಿದು ಹೇಳಿಗೊಂಡು.
ಹತ್ತಾರು ವಿಶೇಷ ಹಡಗುಗೊ, ಸಬ್‌ಮೆರೀನ್‌ಗೊ (ಜಲಾಂತರ್ಗಾಮಿ-ಸಮುದ್ರದಡಿಲೇ ಈಜುವ ಹಡಗು. ಒಂದು ರೀತಿ ನೀರಾನೆಯ ಹಾಂಗೆ. ನೀರಿಂದ ಮೇಲೆ ಬಂದರೂ ತುಂಬ ಹೊತ್ತು ನಿಲ್ತಿಲ್ಲೆ!) ಯಂತ್ರ ಮನುಷ್ಯರು (ರೋಬೊಟ್). ಜನರೇಟರ್, ಅತ್ಯಾಧುನಿಕ ತೆಪ್ಪಂಗ ಹೀಂಗೆ ಹತ್ತು ಹಲವು ಯಂತ್ರಂಗ ಎಣ್ಣೆ ಬೋರ್‌ವೆಲ್‌ನ ಕೇಸಿಂಗ್ ಪೈಪಿಂಗೆ ಮುಚ್ಚಲು ಹಾಕಲೆ ಹೋಯ್ದು.
ಸಮುದ್ರಲ್ಲಿ ಒಂದೂವರೆ ಕಿ.ಲೋ ಮೀಟರ್ ಅಡಿಂಗೆ ಮನುಷ್ಯರಿಂಗೆ ಹೋಗಿ ಆ ಚಳಿಲಿ, ಒತ್ತಡಲ್ಲಿ, ಕಸ್ತಲೆಲಿ ಕೆಲಸ ಮಾಡ್ಲೆ ಎಡಿಗಾ? ಅದಕ್ಕಾಗಿ ಯಂತ್ರ ಮನುಷ್ಯರ ಕಳಿಸಿದ್ದು. ಆದರೂ ಬೋರ್‌ವೆಲ್ಲಿಂಗೆ ಮುಚ್ಚಲು ಹಾಕಲೆ ಎಡಿಗಾಯಿದಿಲ್ಲೆ.

ಬೋರ್‌ವೆಲ್‌ನ ಒಳದಿಕಂಗೆ ಅದರಿಂದ ಕಡಮ್ಮೆ ಅಳತೆಯ ಪೈಪಿನ ಇಳುಸುವ ಯತ್ನವೂ ನಡದತ್ತು. (ಆರು ಇಂಚಿನ ಪೈಪಿನ ಒಳದಿಕೆ ನಾಲ್ಕು ಇಂಚಿನ ಪೈಪಿನ ಇಳಿಸಿದಾಂಗೆ).
ಅದರಲ್ಲಿ ರಜ್ಜ ಯಶಸ್ವಿಯಾದರೂ ಎಣ್ಣೆ ಬೋರ್‌ವೆಲ್ಲಿಂದ ಹೆರ ಬತ್ತಾನೇ ಇದ್ದು. ಆರು ಇಂಚಿನ ಪೈಪಿನ ಒಳಂಗೆ ನಾಲ್ಕಿಂಚಿನ ಪೈಪು ಹಾಕಿದರೆ ನಾಲ್ಕು ಇಂಚಿನಪ್ಪಷ್ಟು ನೀರು ಬಕ್ಕು. ಉಳುದೆರಡಿಂಚು ಹಾಂಗೆ ವೇಸ್ಟ್ ಆವುತ್ತಿದಾ!

ಅಕೇರಿಗೆ ಬೇರೆ ದಾರಿ ಕಾಣದ್ದೆ ತಜ್ಞರು ಒಂದು ಐಡಿಯಾ ಮಾಡಿದ್ದವು.
ಎರಡು ಕಿ.ಮೀ ಗುಂಡಿಲಿ ಎರಡೂ ದಿಕ್ಕಿಲ್ಲಿ ಅಡ್ಡವಾಗಿ ಬೋರು (ರಂಧ್ರ) ಕೊರವದು.
ಈ ಎರಡೂ ಬೋರುಗ ಸೋರುತ್ತಾ ಇಪ್ಪ ಬೋರಿಂಗೆ ತಾಗೆಕ್ಕು. ಅಷ್ಟಪ್ಪಗ ಈ ಬದಲಿ ಬೋರ್‌ವೆಲ್ಲಿಲಿ ಸೇಡಿ ಮಣ್ಣಿನ ತುಂಬುಸುವುದು.
ಎಣ್ಣೆಯ ಬೋರ್‌ವೆಲ್ಲಿಂಗೆ ಮಣ್ಣು ತುಂಬುವಗ ಸೋರ‍್ತದು ನಿಂಗು ಹೇಳ್ತದು ತಜ್ಞರಿಂಗೆ ಇಪ್ಪ ವಿಶ್ವಾಸ. ಆದರೆ ಹೀಂಗೆ ಮಾಡೆಕ್ಕಾರೆ ಇನ್ನೂ ಕೆಲವು ದಿನ ಬೇಕಕ್ಕು. ಕೆಲಸ ಸಾಗಿದ್ದು…

ಈ ಅವಘಡ ನಡೆದ ನಂತರ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಂಗೆ ಸರಿಯಾಗಿ ಒರಕ್ಕು ಬತ್ತಾ ಇಲ್ಲೆ.
ಇಷ್ಟ್ರವರೆಗೆ ಅವ° ನಾಲ್ಕು-ಐದು ಸರ್ತಿ ಆ ಜಾಗಕ್ಕೆ ಹೋಗಿ ಬೈಂದ°.
ವಿಶ್ವದ ದೊಡ್ಡಣ್ಣ ಹೇಳಿ ಎಲ್ಲರಿಂದಲೂ ದಿನೆಗೇಳಿಸಿಕೊಂಡು ಇಂಥ ದೊಡ್ಡ ಆಪತ್ತು ಸಂಭವಿಸಿ ಎರಡು ತಿಂಗಳು ಕಳೆದರೂ ಎಣ್ಣೆ ಸೋರುತ್ತದರ ತಡವಲೆ ಎಡಿಗಾಯಿದಿಲ್ಲನ್ನೇ ಹೇಳ್ತ ವೇದನೆ ಅವಂಗೆ.
ಬಿಪಿ ಕಂಪೆನಿ ಮೇಲೆ ಭಾರಿ ಒತ್ತಡ ಹಾಕುತ್ತಾ ಇದ್ದ°. ಆದರೆ ಎಂತ ಮಾಡುದು ಎಡಿಗಾವ್ತಾ ಇಲ್ಲೆ.
ಈ ಅವಘಡದಿಂದ ತೊಂದರೆ ಅನುಭವಿಸಿದ್ದ ಅಲ್ಲಿನ ಜನಂಗೊಕ್ಕೆ ಕಂಪೆನಿ ಸೂಕ್ತ ಪರಿಹಾರವ (ಒಟ್ಟು ೧೪.೪ ಕೋಟಿ ಡಾಲರ್) ಕೊಟ್ಟಿದು. (ಭಾರತಲ್ಲಿ ಇದು ಸಾಧ್ಯವಾ-ಉದಾಹರಣೆ ಭೋಪಾಲ ಗೇಸು ದುರಂತದ ಸಂತ್ರಸ್ತರಿಂಗೆ ಇನ್ನುದೆ ಸರಿ ಪರಿಹಾರ ಸಿಕ್ಕಿದ್ದಿಲ್ಲೆ.. ಸಿಕ್ಕಿದ್ದದೂ ಅರೆ ಕಾಸಿನ ಮಜ್ಜಿಗೆಗೆ ಸಾಲ…) ಎಣ್ಣೆ ಸೋರುತ್ತದರ ತಡವಲೆ ಕಂಪೆನಿ ಇಲ್ಲಿವರೆಗೆ ೩೧೨ ಕೋಟಿ ಡಾಲರ್ ಖರ್ಚು ಮಾಡಿದ್ದಡ. ಕಂಪೆನಿ ಮೊನ್ನೆ ಮೊನ್ನೆ ಲಂಡನ್‌ನಿಲ್ಲಿ ಹೇಳಿದ್ದು.

ತೈಲ ಸೋರುತ್ತ ಅವಘಡವ ಅಮೆರಿಕ ಇಷ್ಟವರೆಗೆ ಕಂಡಿರದ್ದ ಅತ್ಯಂತ ಗಂಭೀರ ಪ್ರಕೃತಿ ವಿಕೋಪ ಹೇಳಿ ತಿಳಿದವು ಹೇಳ್ತಾ ಇದ್ದವು.
ಅಮೆರಿಕ್ಕಲ್ಲಿ ಪ್ರತೀ ವರ್ಷ ಕತ್ರೀನಾ (ಕೈಫ್ ಅಲ್ಲ!) ಹೇಳ್ತ ಚಂಡ ಮಾರುತ ಅಪ್ಪಳುಸುತ್ತು. ಅದರಿಂದಾದ ನಷ್ಟದ ಇಪ್ಪತ್ತು ಪಟ್ಟು ಹೆಚ್ಚು ನಷ್ಟ ಈ ಎಣ್ಣೆಂದ ಆಯ್ದಡ. ಇನ್ನು ಕೆಲವು ತಿಳಿದವರ ವಾದವೇ ಬೇರೆ. ಇಷ್ಟ್ರವರೆಗೆ ನೀರಿನೊಟ್ಟಿಂಗೆ ಮಿಕ್ಸ್ ಆದ ಎಣ್ಣೆ (ಇಂಧನ)ನಮ್ಮ ಉಪಯೋಗಕ್ಕೆ ಮಣ್ಣ ಸಿಕ್ಕಿದ್ದರೆ ಅಂದಾಜಿ ಒಂದು ಲಕ್ಷ ಕಾರುಗೊವಕ್ಕೆ, ಸಾವಿರ ಹಡಗುಗೊಕ್ಕೆ ಒಂದು ವರ್ಷಕ್ಕೆ ಸಾಕಾವುತ್ತಿತಡ.

ಎಂಥ ದುರಂತ, ಎಲ್ಲಾ ಅತ್ಯಾಧುನಿಕ ಪರಕರಂಗ ಸಾಮಗ್ರಿಗ ಅಲ್ಲದ್ದೆ ಶ್ರೀಮಂತ ದೇಶ, ವಿಶ್ವದ ದೊಡ್ಡಣ್ಣ ಹೇಳಿ ದಿನೆಗೆಳಿಸಿಕೊಳ್ಳುತ್ತ ಅಮೆರಿಕಕ್ಕೆ ಈ ಆಪತ್ತಿನ ಸರಿಯಾಗಿ ನಿರ್ವಹಣೆ ಮಾಡ್ಲೆ ಎಡಿಗಾಯಿದಿಲ್ಲೆ.. ಹೇಳ್ರೆ ಅಲ್ಲಿನ ಪರಿಸ್ಥಿತಿಯ ನಿಂಗೊ ಲೆಕ್ಕಹಾಕಿ.

ಕಡೇ ಮಾತು: ದೊಡ್ಡವರಿಂಗೂ ದೇವರು ಒಳ್ಳೆ ಸಮಯಲ್ಲಿ ಬುದ್ಧಿ ಕಲುಸುತ್ತಾ ಹೇಳುದು ಇದಕ್ಕೇ ಆದಿಕ್ಕು ಅಲ್ಲದಾ…

Wednesday, June 16, 2010

ಮತ್ತೆ ಮತ್ತೆ ಬರಲಿ ಬಾಲ್ಯ....

ಳೆದ ವಾರ ಕೆಪ್ಪಣ್ಣನ ಕ್ಯಾಂಪು ಕೊಡೆಯಾಲಲ್ಲಿ. ಆಪೀಸಿಂಗೆ ನಾಲ್ಕು ದಿನ ರಜೆ ಹಾಕಿ ಹೆರಟದು. ಬೆಂಗ್ಳೂರಿಂದ ಆನೊಬ್ಬನೇ. ಗುರಿಕ್ಕಾರ, ಅಜ್ಜಕಾನ ಬಾವ, ಗುಣಾಜೆ ಮಾಣಿಯಾದಿಯಾಗಿ ಎಲ್ಲರೂ ಆಚಕರೆ ಮಾವನ ಮದುವೆ ಸುಧಾರಸ್ಲೇ ಹೇಳಿ ಮೊದಲೆ ಹೋಗಿತ್ತವು. ಒಪ್ಪಣ್ಣ ಹೇಂಗೂ ಊರಿಲ್ಲೆ ಇಪ್ಪದಿದಾ.. ಕೊಡೆಯಾಲಲ್ಲಿ ಎಲ್ಲರೂ ಒಟ್ಟಿಂಗೆ ಸಿಕ್ಕುತ್ತದು ಹೇಳಿ ಬೆಂಗ್ಳೂರಿಲ್ಲಿ ಮಾತಾಗಿತ್ತು.

ಕೊಡೆಯಾಲಲ್ಲಿ ನಮ್ಮ ಬೈಲಿನವೂ ತುಂಬಾ ಜೆನ ಇದ್ದವಿದಾ. ನಮ್ಮ ಯೇನಂಕೂಡ್ಳಣ್ಣನ ಕರ್ಮಭೂಮಿ ಅದು. ಅಲ್ಲಿಗೆ ಹೋದಿಪ್ಪಗಾ ಅವನ ಕಂಡು ಮಾತಾಡಸದ್ದೇ ಇದ್ದರೆ, ಆನು ಅಲ್ಲಿಗೆ ಹೋದ್ದು, ಅವಂಗೆ ಮಾತಾಡ್ಳೆ ಸಿಕ್ಕದ್ದ ವಿಚಾರಂಗಳ ಮರವ ವರೆಗೆ ಎನ್ನತ್ತರೆ ಮಾತಾಡಿಕ್ಕ ಅವ°. (ಅಷ್ಟು ಕೊಂಗಾಟದ ಪ್ರೀತಿ ಅವಂಗೆ ಎನ್ನತ್ರೆ!). ಅವ° ಮಾಂತ್ರ ಅಲ್ಲದ್ದೆ, ಆಲಂಕೋಡ್ಲು ಬಾವ, ಪೆರುಮುಂಡ ಮಾಣಿ, ಮಂಗ್ಳೂರು ಅಕ್ಕ° ಹೀಂಗೆ ಎಲ್ಲರುದೇ ಅಲ್ಲೇ ಇಪ್ಪದಿದಾ. ಅವರನ್ನೂ ಭೆಟ್ಟಿಯಾಗದಿದ್ದರೆ ಎನ್ನ ಮನಸ್ಸಿಂಗೂ ಸಮಾಧಾನ ಇಲ್ಲೆ.
ಎಲ್ಲೊರಿಂಗೂ ಫೋನ್ ಮಾಡಿ ಐಡಿಯಲ್ ಕ್ರೀಂ ಪಾರ್ಲರ್‌ಲ್ಲಿ ಸಿಕ್ಕುವಾ° ಹೇಳಿ ಆತು ಹೊತ್ತೊಪ್ಪಾಗ. ಆದರೆ ಬೆಂಗಳೂರಿನ ಮಾಣಿಯಂಗ ಎಲ್ಲಿದ್ದವು? ಒಪ್ಪಣ್ಣನೂ ಕೈಕೊಟ್ಟ°. ಐಡಿಯಲ್ ಕ್ರೀಂ ಪಾರ್ಲರಿಲ್ಲಿ ಒಟ್ಟು ಸೇರಿದ್ದು ಆನು, ಯೇನಂಕೂಡ್ಳಣ್ಣ, ಮಂಗ್ಳೂರು ಅಕ್ಕ, ಪೆರುಮುಂಡ ಮಾಣಿ ಮತ್ತೆ ಆಲಂಕೋಡ್ಳು ಬಾವ. ನಾವಿಷ್ಟೆ ಜನವೋ.. ಅವು ಎಲ್ಲಿದ್ದವು? ಹೇಳಿ ಕೇಳಿದ ಯೇನಂಕೂಡ್ಳಣ್ಣ ಎನ್ನ ಕಂಡ ಕೂಡ್ಳೆ. ಉಮ್ಮಪ್ಪ ಎಂತು ಸುದ್ದಿಲ್ಲೆ ಸಮೋಸವೂ ಕಳಿಸಿದ್ದವಾಲ್ಲೆ. ಬಕ್ಕು ಬಾರದ್ದರೆ ಒಳ್ಳೆದಾತು, ಬಿಲ್ಲು ರಜ್ಜ ಕಡಮ್ಮೆ ಅಕ್ಕು ಹೇಳಿ ಹೇಳಿದಂ ಪೆರುಮುಂಡ ಮಾಣಿ ತಮಾಷೆಗೆ.! ನಿಜವಾಗಿ ಹೇಳೆಕ್ಕಾದರೆ ಹಂಚಿ ತಿಂಬದರಲ್ಲಿ ನಂಬಿಕೆ ಮಡಿಗಿಪ್ಪವೇ ಅಲ್ಲಿದ್ದದು. ಅಂತು ವಿಧ ವಿಧ ಐಸ್ ಕ್ರಿಂಗೆ ಓರ್ಡರು ಮಾಡಿದೆಯಾಂ. ದೊಡ್ಡ ಹೋಟ್ಳು, ಕ್ರೀಂ ಪಾರ್ಲರಿಲ್ಲಿ ಓರ್ಡರು ಮಾಡಿ ಅರ್ಧ ಗಂಟೆ ಕಾಯೆಕ್ಕಪ್ಪ ವಿಚಾರ ಎಲ್ಲೊರಿಂಗೂ ಗೊಂತಿದ್ದನ್ನೆ. ಎಂಗಳುದೆ ಕಾಯಿಕ್ಕೊಂಡು ಇತ್ತಿದೆಯಾಂ ಸಪ್ಲೇಯರ್ ಐಸ್ ಕ್ರೀಂ ತಪ್ಪಲೆ.

ಹೀಂಗೆ ಕಾದುಗೊಂಡಿಪ್ಪಗ ಸುರು ಆತು ಲೊಟ್ಟೆ ಪಟ್ಟಾಂಗ, ಹೊತ್ತು ಹೋಯೆಕ್ಕನ್ನೇ. ಎಲ್ಲೊರಿಂಗು ಒಟ್ಟಿಂಗೆ ಕೋಲೇಜು ದಿನಂಗಳ ನೆಂಪಾತು. ಕೆಪ್ಪಣ್ಣನ ಸಹಿತ ಎಲ್ಲೊರುದೆ ಅವರ ಸ್ಮೃತಿಕೋಶಲ್ಲಿಪ್ಪ ನೆಂಪುಗಳ ಒಂದೊಂದಾಗಿ ಹೇಳಿದೆಯಾ. ಯೇನಂಕೂಡ್ಳಣ್ಣ ಅವನ ಪ್ರೊಫೆಸರ್‌ನ ಪಿರೀಡ್‌ಲ್ಲಿ ಗಹಗಹಿಸಿ ನೆಗೆಮಾಡಿಕೊಂಡಿದ್ದ ಕಥೆಯ ನೆಗೆಮಾಡಿಗೊಂಡೆ ಹೇಳಿದ! ಅದರ ಕೇಳಿ ಎಂಗೊದೆ ನೆಗೆ ಮಾಡ್ಳೆ ಮಾತ್ರ ಬಾಕಿ. ಅಷ್ಟಪ್ಪಗ ಪೆರುಮುಂಡ ಮಾಣಿ ಒಂದು ಡೈಲಾಗ್ ಹೊಡೆದಾಂ ಇಂಗ್ಲಿಷಿಲ್ಲಿ. ’ಸ್ಟ್ಯೂಡೆಂಟ್ ಲೈಫ್ ಈಸ್ ದ ಗೋಲ್ಡನ್ ಲೈಫ್’ ಹೇಳಿ. ಅವನ ಡೈಲಾಗ್ ಕೇಳಿ ಆನು ಶಭಾಶ್ ಹೇಳಿ ಹೇಳ್ಳೆ ಬಾಯಿ ತೆಗೆಕು, ಅಷ್ಟಪ್ಪಗ ಅದೆಲ್ಲಿಂದ ಕೋಪ ಬಂತೋ ಏನೋ ಮಂಗ್ಳೂರಕ್ಕ ’ಅಪ್ಪಪ್ಪು… ಮಾಷ್ಟ್ರುಗಳ, ಲೆಕ್ಚರ್‌ಗಳ ಲಾಲಿ (ತಮಾಷೆ) ಮಾಡ್ಳೆ ಸಿಕ್ಕುವಗ, ಕೂಸುಗಳತ್ರೆ ಲೊಟ್ಟೆ ಪಟ್ಟಾಂಗ ಹೊಡವ ಚಾನ್ಸ್ ಸಿಕ್ಕುವಾಗ ಅದು ಬಂಗಾರದ ಜೀವನ ಆಗದ್ದೆ ಇರ‍್ತಾ? ಹೇಳಿ ಮುಸುಂಟು ತಿರುಗಿಸಿತ್ತು. ವಿದ್ಯಾರ್ಥಿ ಜೀವನ ಅಲ್ಲದೆ ಬೇರಾವುದೇ ಜೀವನ ಚಿನ್ನದಾಂಗೆ ಇರ‍್ತಿಲ್ಲೆಯಾಯ್ಕು ಹೇಳ್ತ ಒಕ್ಕಣೆ ಬೇರೆ ಕೊಟ್ಟತ್ತು. ಆನೆಂತಕಾರು ಈ ಮಾತು ಹೇಳಿದನೋ ಹೇಳಿ ಅನುಸಿತ್ತು ಪೆರುಮುಂಡ ಮಾಣಿಗೆ. ನಿಜಾಂಶ ಹೇಳೆಕ್ಕಾರೆ ಅವಂಗೆ, ಅಲ್ಲಿ ಇದ್ದವಕ್ಕೆ ವಿದ್ಯಾರ್ಥಿ ಜೀವನ ಬಂಗಾರದ್ದಾಗಿತ್ತಿಲ್ಲೆ. ಎಲ್ಲರುದೇ ಕಷ್ಟ ಪಟ್ಟೇ ಶಿಕ್ಷಣ ಪಡೆದವು. ಲೋಕ ರೂಢಿ ಮಾತಿದಾ, ಪಕ್ಕನೆ ಪೆರುಮುಂಡ ಮಾಣಿಗೆ ಹೇಳಿಹೋತು.. ಅಂತು ಅಕ್ಕನ ಕ್ಷಮೆ ಗಿಮೆ ಕೇಳಿ ಅದರ ಸಮಾಧಾನ ಮಾಡಿಗೊಂಡಿಪ್ಪಗ ಓರ್ಡರ್ ಮಾಡಿದ ಐಸ್‌ಕ್ರೀಂ ಬಂತು. ಕ್ರೀಂ ತಂಪಲ್ಲದೋ ಕೋಪ ಎಲ್ಲಾ ಇಳಿದು ಹೋತು ಅಕ್ಕಂಗೆ! ನಮ್ಮ ಬೈಲಿನ ಜವ್ವನಿಗರ ಅನುಪಸ್ಥಿತಿಯಲ್ಲಿ ಇದರ ತಿನ್ನಕ್ಕನ್ನೆ ಹೇಳ್ತ ಸಣ್ಣ ವೇದನೆಲಿಯೇ (?) ಕ್ರೀಂ ತಿಂದು ಅಲ್ಲಿಂದ ಹೆರಟೆಯಾ°.

ಎಲ್ಲರ ಮನೆಯೂ ಒಂದೊಂದು ಹೊಡೆಲಿ ಇಪ್ಪದಿದಾ. ಸ್ಟೇಟ್‌ಬ್ಯಾಂಕಿಂಗೊರೆಗೆ ಒಟ್ಟಿಂಗೆ ಬಂದು ಎಲ್ಲರೂ ಅವರವರ ಬಸ್ ಹತ್ತಿದೆಯಾ ಅತ್ಲಾಗಿತ್ಲಾಗಿ ಟಾಟಾ ಹೇಳಿ. ಆನು ಪುತ್ತೂರಿಂಗೆ ಬಪ್ಪ ಬಸ್ ಹತ್ತಿದೆ. ಕೊಡೆಯಾಲ ಪುತ್ತೂರಿಗೆ ಬರೆಕಾರೆ ರಜ್ಜ ಹೊತ್ತು ಬೇಕಿದಾ. ಕಿಟಿಕಿಯ ಹತ್ತರೆ ಕೂದುಗೊಂಡು ಬಪ್ಪಗ ರಭಸಲ್ಲಿ ಬೀಸುವ ಗಾಳಿಗೆ ವರಕ್ಕು ತೂಗಿದ ಹಾಂಗೆ ಆತು. ಆದರೆ ವರಕ್ಕು ಬೈಂದಿಲ್ಲೆ.
ವಿದ್ಯಾರ್ಥಿ ಜೀವನ ಒಬ್ಬೊಬ್ಬಂಗೆ ಒಂದೊಂದು ಅನುಭವ ಕೊಟ್ಟಿಕ್ಕು. ಕೆಲವು ಜನಕ್ಕೆ ನಿಜವಾಗಿಯು ಅದು ಬಂಗಾರದ ಹಾಂಗೆ ಇದ್ದಿಕ್ಕು. ಇನ್ನೊಂಬ್ಬಗೆ ಬಂಗಾರದ ಜೀವನ ಆಗಿರ. ಅದು ಅವು ಅವು ತಿಳುಕ್ಕೊಂಡ ಹಾಂಗೆ ಅದು ಅವು ಏವ ಪರಿಸ್ಥಿತಿಲಿ ಆ ಜೀವನವ ಎದುರಿಸಿದ್ದವು ಎಂಬುದರ ಮೇಲೆ ನಿಂತಿರ‍್ತು ಹೇಳುದು ಎನ್ನ ಅನಿಸಿಕೆ. ಕೆಪ್ಪಣ್ಣಂಗೆ ವಿದ್ಯಾರ್ಥಿ ಜೀವನ ಬಂಗಾರದ್ದು ಆಗಿರದಿದ್ದರೂ, ಕೀಜಿ, ಕಬ್ಬಿಣ್ಣ ಅಂತೂ ಆಗಿತ್ತಿಲ್ಲೆ!. ಅದರಳಿ..

ಮಂಗ್ಳೂರು ಅಕ್ಕನ ಮಾತು ತಲೆಯ ಒಳ ಕೊರವಲೆ ಸುರು ಮಾಡಿತ್ತು. ಅದರ ಒಕ್ಕಣೆ, ಮೆದುಳಿನ ಎಲ್ಲಾ ನರಂಗಳಲ್ಲು ಹರಿದಾಡಿತ್ತು! ಚೆಲಾ..ಅಕ್ಕನ ಮಾತಿಲ್ಲಿದೆ ಪಾಯಿಂಟ್ ಇದ್ದು ಹೇಳಿ ಎನಗೆ ಅನುಸಿತ್ತು. ತಕ್ಷಣ ಎನ್ನ ನೆಂಪಿಂಗೆ ಬಂದದು ಬಾಲ್ಯ ಜೀವನ! ಎಷ್ಟು ಚೆಂದದ ಜೀವನ ಅದು. ಆಟ, ಹುಡುಗಾಟ, ಪಾಠ, ತುಂಟಾಟ, ಕೊಂಗಾಟ. ಬೆಚ್ಚಂಗಿಪ್ಪ ಅಬ್ಬೆಯ ಅಪ್ಪುಗೆ, ಅಪ್ಪನ ಪ್ರೀತಿ, ನೆರೆಕರೆಯವರ ಪ್ರೀತಿಯ ಆಶೀರ್ವಾದ, ಹಾರೈಕೆ. ಆ ಜೀವನ ಬಂಗಾರದ್ದಲ್ಲದೇ ಮತ್ತೆಂತರ? ಅದಕ್ಕಿಂತಲೂ ಒಂದು ಒಂದು ಕೈ ಮೇಲೆಯೇ.
ಬಾಲ್ಯ ಜೀವನನಲ್ಲಿ ನಡೆದ ಘಟನೆಗಳ ಮರವೆಲಡಿಗಾ?… ನಿಜಕ್ಕೂ ಹೇಳೆಕ್ಕಾರೆ, ಆ ಜೀವನವ ಬಂಗಾರ, ವಜ್ರ, ವೈಢೂರ್ಯ,ಮಾಣಿಕ್ಯಂದ ಅಳವಲೆಡಿಗಾ? ಖಂಡಿತ ಎಡಿಯ.
ಎಲ್ಲಾ ನೆಂಪಾವ್ತಾ ಇದ್ದು ಈಗ… ಸ್ಮೃತಿ ಪಟಲಲ್ಲಿ ಹಾಸಿಗೆಯ ಹಾಂಗೆ ಸುತ್ತು ಹಾಕಿಕೊಂಡಿಪ್ಪ ನೆಂಪುಗ ಈಗ ಒಂದೊಂದೆ ಸುರುಳಿಯಾಗಿ ಬಿಚ್ಚಿಕೊಳ್ತಾ ಇದ್ದು.
ಬಾಲ್ಯವ ವಿವರಿಸುದು ಹೇಂಗೆ? ಗೊಂತಾವ್ತಾ ಇಲ್ಲೆ, ಹೇಂಗೆ ವಿವರುಸೆಕ್ಕು ಹೇಳ್ತದು! ಆ ಜೀವನಲ್ಲಿ ಹೇಂಗೆ ಮಾಡಿದರೂ ಚೆಂದ. ನಿಷ್ಕಲ್ಮಶ ಮನಸ್ಸು ಹೊಂದಿಪ್ಪ ಕಾಲ ಅದು. ಅಲ್ಲಿ ದ್ವೇಷ ಅಸೂಯೆಗೆ ಅವಕಾಶ ಇಲ್ಲೆ. ಕೋಪ ತಾಪ ಅಂತು ಇಲ್ಲಲೇ ಇಲ್ಲೆ.
ಅಂಬಗ ಆಡಿದ ಆಟೊಂಗಕ್ಕೆ ಲೆಕ್ಕ ಇದ್ದ? ಎಂಥೆಂಥಾ ಆಟಂಗಳ ಆಡಿದ್ದಿಲ್ಲೆ. (ಆಟಂಗಳ ಬಗ್ಗೆ ಅಜ್ಜಕಾನ ಬಾವ ಬರೆತ್ತೆ ಹೇಳಿ ಹೇಳಿದ್ದ).
ಅಂಬಗ ಎಂಥ ಮಾಡಿದರೂ ಚೆಂದವೇ. ಮನಸ್ಸಿಂಗೆ ಸಿಕ್ಕಿಯೊಂಡಿದ್ದವು ಆನಂದವೇ. ಮಹಾನಂದವೇ!

ಕಾಲ ಬದಲಾದಾಂಗೆ ಜೀವನ ಕ್ರಮವೂ ಬದಲಾಯಿದು. ನಮ್ಮ ಹಿರಿಯೋರ ಬಾಲ್ಯ ಜೀವನಕ್ಕೂ, ಈಗಾಣ ಜವ್ವನಿಗರ ಬಾಲ್ಯ ಜೀವನಕ್ಕು, ಈಗಾಣ ಮಕ್ಕ ಅನುಭವಿಸುತ್ತಿಪ್ಪ ಜೀವನಕ್ಕೆ ಅಜಗಜಾಂತರ ವ್ಯೆತ್ಯಾಸ ಇಕ್ಕು. ನಾವು ಬಾಲ್ಯಲ್ಲಿ ಆಡಿದ ಆಟಂಗಳ ನಮ್ಮ ಹೆರಿಯವು ಆಡಿರವು, ಈಗಣ ಮಕ್ಕ ಆಡ್ತಾ ಇಲ್ಲೆ! ಆದರೆ ಅವರವರ ಬಾಲ್ಯದ ಅನುಭವಂಗ ಬೇರೆ ಬೇರೆ. ಅವಕ್ಕೆ ಅದರ ಮರವಲೆಡಿಯಾ. ಅದು ಅವರ ಜೀವನ ಪೂರ್ತಿ ಬೆಚ್ಚಂಗಿಪ್ಪ ನೆಂಪುಗಳಾಗಿ ಅವರ ಮನಸ್ಸಿನ ಮೂಲೆಲಿ ಇರ‍್ತು.
ಉದಾಹರಣೆ ಬೇಕಾರೆ ಕೊಡ್ಳಕ್ಕು. ನಿಂಗೊಗೆ ನೆಂಪಿಕ್ಕು. ನಾವು ಸಣ್ಣಾದಿಪ್ಪಗ, ಅಡಕ್ಕೆ ಕೊಯಿಲಿನ ಸಂದರ್ಭಲ್ಲಿ ಅಡಕ್ಕೆ ಬಡಿದು ಆದ ಮೇಲೆ ಕೊನೆಚ್ಚಂಗಿನ ಮೇಲೆ ಕೂದು ಆಡಿದ ಬಸ್ಸಾಟವ ಈಗಾಣ ಮಕ್ಕ ಆಡ್ತಾವೆಲ್ಲೆ, ತಂಗೆಕ್ಕಳ/ತಮ್ಮಂದ್ರ ಅಡಕ್ಕೆ ಹಾಳೆಲಿ ಕೂರ‍್ಸಿ ಅಣ್ಣಂದ್ರು/ಅಕ್ಕಂದ್ರು ಎಳಕ್ಕೊಂಡು ಹೋಗಿಂಯೊಂಡಿದ್ದ ಹಾಳೆಯ ಆಟವನ್ನೂ ಈಗಾಣವು ಆಡುವುದರ ಕಾಂಬಲೆ ಸಿಕ್ಕುಗಾ? (ಆಡ್ತರೂ ಆ ಪ್ರಮಾಣ ತುಂಬಾ ಕಮ್ಮಿ). ಅವು ಕಂಪ್ಯೂಟರಿನ ಮುಂದೆ ಕೂದೆ ಹೊತ್ತು ಕಳಗು. ಇಲ್ಲದ್ರೆ ಯೇವುದಾದರೂ ಟ್ಯೂಷನ್ನಿಂಗೆ ಮಣ್ಣ ಹೋಕು. ಕಾಲ ಬದಲಾಂದಗೆ ನಮ್ಮ ಜೀವನನಲ್ಲಿ, ಜೀವನ ಶೈಲಿಲಿ ವ್ಯೆತ್ಯಾಸ ಆದ್ದರ ಒಪ್ಪಣ್ಣ ಹಲವು ಲೇಖನನಲ್ಲಿ ನಾಜೂಕಾಗಿಯೂ ವೆಂಗ್ಯವಾಗಿಯೂ ಬರದ್ದ. ಮತ್ತೆ ಮತ್ತೆ ಬರದರೆ ಅದು ಪುನರಾವರ್ತನೆ ಅಕ್ಕು.

ಇದೆಲ್ಲಾ ಸಂತೋಷಲ್ಲಿ ಕಣ್ಣಿಲ್ಲಿ ನೀರು ತರಿಸುವ ವಿಷಯಂಗ. ಬೇಜಾರಿಲ್ಲಿ ಕಣ್ಣೀರು ಹರಿವಲೆ ಕಾರಣವಪ್ಪ ವಿಷಯಂಗಳೂ ನಮ್ಮ ಸಮಾಜಲ್ಲಿ (ಇಲ್ಲಿ ಕೇವಲ ಹವ್ಯಕ ಸಮಾಜವ ಹೇಳ್ತ ಇಲ್ಲೆ) ಇಲ್ಲದ್ದಿಲ್ಲೆ. ಹೀಂಗೆ ಸಂತೋಷಲ್ಲಿ ಬಾಲ್ಯ ಜೀವನವ ಕಳೆಯಕ್ಕಾದ ಎಷ್ಟೋ ಮಕ್ಕ ನಮ್ಮ ಸಮಾಜಲ್ಲಿ ಒಪ್ಪೊತ್ತು ಊಟಕ್ಕಾಗಿ ಭಿಕ್ಷೆ ಬೇಡುವ, ಜವ್ವನಿಗರ ಹಾಂಗೆ ಗೈಯ್ಯುವ ದೃಶ್ಯಂಗಳ ಕಂಡರೆ ನಿಜಕ್ಕೂ ಬೇಜಾರಾವುತ್ತು. ಅವರ ಪಾಲಿಂಗೆ ಅಕ್ಷರಶಃ ಬಾಲ್ಯ ಬಾಲ್ಯವಲ್ಲ. ಅದು ನರಕ. ಜೀವನದ ಮುಂದಿನ ಘಟ್ಟಗಳಲ್ಲಿ ಅವು ಅನುಭವಿಸಿದ್ದಕ್ಕಾದರ ಬಾಲ್ಯಲ್ಲೆ ಅನುಭವಿಸುತ್ತಾ ಇದ್ದವು. ಎಂಥ ವಿಪರ್ಯಾಸ. ಅವರ ಸ್ಥಿತಿ ಆರಿಂಗೂ ಬಪ್ಪಲಾಗ, ಅವರ ಬಾಲ್ಯ ಜೀವನದ ಮಹೋನ್ನತ ಕ್ಷಣಂಗಳ ಅಕ್ಕೆ ಒದಗಿಸೆಕ್ಕು ಹೇಳ್ತದು ಕರುಣಾಮಯಿ ದೇವರ ಹತ್ರೆ ಎನ್ನ ಸಣ್ಣ ಪ್ರಾರ್ಥನೆ.

ಕಡೇ ಮಾತು: ಹೇ ಬಾಲ್ಯವೇ..ನೀನೇಕೆ ಮತ್ತೆ ಬಪ್ಪಲಾಗ? ಎಲ್ಲೊರಿಂಗು ಸಂತೋಷ ತಪ್ಪಲಾಗ? ನಿನ್ನತ್ರೆ ಎನ್ನ ಕೋರಿಕೆ ಒಂದೆ.

ಬಾಲ್ಯವೇ ನೀನು ಮತ್ತೆ ಮತ್ತೆ ಮರಳಿ ಬಾ….

Saturday, February 27, 2010

ಎಂಥ ಬೇಕಾರೂ ಆಗಲಿ.. ಜೀವನ ಮುಂದೆ ಸಾಗಿಗೊಂಡೇ ಇರೆಕು!..

ಮೊನ್ನೆ ಬೆಂದಕಾಳೂರಿಂದ(ಬೆಂಗ್ಳೂರು) ಊರಿಂಗೆ ಬಸ್ಸಿಲ್ಲಿ ಹೋಪಗ ಮೊಬೈಲಿಲ್ಲಿ ಎಫ್‌ಎಂ ಕೇಳಿಗೊಂಡಿತ್ತೆ. ಹೊತ್ತು ಹೋಯೆಕನ್ನೆ ರಾಜಹಂಸ ಬಸ್ಸಿಲ್ಲಿ. ೧೧ ಎಫ್‌ಎಂ ಸ್ಟೇಷನ್ ಸಿಕ್ಕುತ್ತಿದಾ. ಸುಮಾರು ೬೦ ರಿಂದ ೭೦ ಕಿಲೋ ಮೀಟರ್‌ವರೆಗೆ ಸರಾಗವಾಗಿ ಎಫ್‌ಎಂ ಕೇಳ್ತಿದಾ. ಚಾನಲ್ ಬದಲಿಸಿಗೊಂಡಿಪ್ಪಗ ಯಾವುದೋ ಒಂದರಲ್ಲಿ (ಸರಿ ನೆಂಪಿಲ್ಲೆ) ಸುದೀಪ ಏಕ್ಟ್ ಮಾಡಿದ್ದ ಮುಸ್ಸಂಜೆ ಮಾತು ಪಿಚ್ಚರಿನ ಪದ್ಯ. ಏನಾಗಲಿ.. ಮುಂದೆ ಸಾಗೂ ನೀ... ಬಯಸಿದ್ದೆಲ್ಲಾ ಸಿಗದು ಬಾಳಲಿ... ಪದ್ಯ ಬಂದುಗೊಂಡಿತ್ತು.

ಈ ಪದ್ಯವ ಈ ಹಿಂದೆ ಸುಮಾರು ಸರ್ತಿ ಕೇಳಿತ್ತೆ. ಆದರೆ ಮೊನ್ನೆ ಕೇಳುವಾಗ ಮಾತ್ರ ಏನೋ ಒಂದು ರೀತಿ ಫೀಲು ಆತು ಮನಸ್ಸಿಂಗೆ..ಬಸ್ಸಿಲ್ಲಿ ಒಬ್ಬನೇ ಇತ್ತನ್ನೆ ಆ ಕಾರಣಕ್ಕೆ ಆ ರೀತಿ ಆದ್ದಾದಿಕ್ಕು. ಉಮ್ಮಪ್ಪ!

ಆ ಪದ್ಯದ ಚರಣದ ಸಾಲುಗ ಅಷ್ಟಾಗಿ ಕಾಡಿದ್ದಿಲ್ಲೆ. ಮೊದಲೆರಡು ಸಾಲು ಇದ್ದನ್ನೆ .... ಅದರ ಕೇಳುವಾಗ ಮಾತ್ರ ಏನೋ ಒಂದು ರೀತಿ ಆವ್ತು. ಅದರ ಎಂಥ ಹೇಳಿ ಹೇಳ್ಳೆ ಎಡ್ತಿಲ್ಲೆ. ಆ ಮಾತು ಎಷ್ಟು ಸತ್ಯ ಹೇಳಿ ಅಂಬಗಂಬಗ ಎನಗೆ ಅನುಸಿತ್ತು.

ಎನ್ನನ್ನು ಸೇರಿಸಿ ಎಲ್ಲರೋದೆ ಜೀವನಲ್ಲಿ ಎಂತೆಂಥಾ ಕನಸು ಕಾಣ್ತವು, ಕಂಡಿರ‍್ತವು. ಆದರೆ ಅದೆಲ್ಲಾ ನಡೆತ್ತಾ? ಹಾಂಗೆ ಒಂದು ವೇಳೆ ನಡೆದರೆ ಎಷ್ಟು ನಡೆತ್ತು? (ಕೆಲವೇ ಕೆಲವು ಶೇಕಡಾದಷ್ಟು.) ನಡೆದರೆ ನಾವು ಹೀಂಗಿರ‍್ತಾ? ನಮ್ಮ ಕಲ್ಪನೆಂಗಳೇ, ಕನಸುಗಳೇ ಬೇರೆ, ಅವನ (ದೇವರು) ಯೋಜನೆಗಳೇ ಬೇರೆ.. ಸುಮ್ಮನೆ ಹೇಳ್ತಾ ನಾವು ಅವನ ದೇವರು ಹೇಳಿ!.

ಇದಕ್ಕೆ ನಮ್ಮ ಸುತ್ತ ಮುತ್ತ ಹಲವು ಉದಾಹರಣೆಗ ಸಿಕ್ಕುಗು. ಎನಗೆ ಗೊಂತಿಪ್ಪ ಎರಡು ಘಟನೆಗಳ ಬಗ್ಗೆ ಆನು ಹೇಳೆಕ್ಕು..

ಕೆಪ್ಪಣ್ಣನ ಪೈಕಿಲಿ ಒಂದು ಕೂಸಿತ್ತು. (ಈಗಲೂ ಇದ್ದು) ಅವಕ್ಕೆ ಖಂಡಿಗಟ್ಲೆ ಅಡಕ್ಕೆ ಆಗ. ಕೆಲವು ಮಣ ಅಕ್ಕು. ಹಾಂಗೆ ಹೇಳಿ ಉಂಬದಕ್ಕೆ ಎಲ್ಲಾ ಏನೂ ಕೊರತೆ ಇತ್ತಿಲ್ಲೆ. ಈಗಾಣ ಕೂಸುಗಳ ಹಾಂಗೆ ಪೇಷನ್ ಎಲ್ಲಾ ಅರಡಿಯಾ ಕೂಸಿಂಗೆ. ವಿದ್ಯೆ ಕಲಿಯೆಕ್ಕು ಹೇಳ್ತ ಭಾರಿ ಆಸೆ ಇತ್ತು, ಅಂಬಗಂಬಗ ಅದರ ಆತ್ಮೀಯರ ಹತ್ತರೆ ಹೇಳುಗು. ಕನಿಷ್ಠ ಪಕ್ಷ ಪೋಸ್ಟ್ ಗ್ರಾಜ್ಯುವೇಷನ್ ಮಾಡಿ ಲೆಕ್ಚರರ್ ಆಯೆಕ್ಕು ಹೇಳ್ತದು ಕೂಸಿನ ಮಹಾತ್ವಾಕಾಂಕ್ಷೆ ಆಗಿತ್ತು. ಪ್ರೈಮರಿ, ಹೈಸ್ಕೂಲಿಲ್ಲಿ ಎಲ್ಲ ಒಳ್ಳೆ ಮಾರ್ಕು ತೆಗೆದಿತ್ತು. ಕೂಸಿನ ಗುರಿ ಮುಂದಿನ ಶಿಕ್ಷಣದತ್ತ ಹೊರಳಿತ್ತು. ಅದೇ ಕನಸಿಲ್ಲಿದೆ ಇತ್ತು. ಕೂಸಿನ ಕನಸು ಇದಾದರೆ, ಅದರ ಅಬ್ಬೆ ಅಪ್ಪನ ಕನಸೇ ಬೇರೆ ಮದುವೆ ಮಾಡುದು! ಎಸ್‌ಎಸ್‌ಎಲ್‌ಸಿ ಅಪ್ಪಗ ಅದಕ್ಕೆ ಹದ್ನಾರು ವರ್ಷ ಇದಾ. ಇನ್ನೂ ಮೈನರು ಹೇಳಿ ಪಿಯುಸಿಗೆ ಸೇರಿಸಿದವು.

ಮೊದಲನೇ ಪಿಯುಸಿ ಕಳಿವಾಗಲೇ ಜಾತಕ ಪಟ ಕೊಡ್ಲೆ ಸುರು ಮಾಡಿದವು. ಇದರ ಎಡಕ್ಕಿಲ್ಲೆ ಅಂಬಗಂಬಗ ಎನಗೆ ಈಗಲೇ ಮದುವೆ ಬೇಡ, ಇನ್ನೂ ಓದೆಕ್ಕು ಹೇಳಿ ಕೂಸು ಹೇಳಿಕ್ಕೊಂಡಿತ್ತು. ಆದರೂ ಅಪ್ಪ ಕೇಳೇಕ್ಕನ್ನೆ. ಅಂದರೂ ಕೂಸಿನ ಮನಸ್ಸಿಲ್ಲಿ ಏನೊ ಒಂದು ಮೊಂಡು ಧೈರ್ಯವೋ, ಅಲ್ಲ ಭರವಸೆಯೋ ಇತ್ತು..ಎನಗರಡಿಯ. ಅದು ದೇವರಿಂಗೆ ಹೊಡಾಡುವಾಗ ಮಾಡುವ ಪ್ರಾರ್ಥನೆಗಳ ಪಟ್ಟಿಲ್ಲಿ ಎನ್ನ ಮದುವೆ ಇನ್ನೂ ಮುಂದೆ ಹೋಪಾಂಗೆ ಮಾಡು ದೇವರೆ ಹೇಳ್ತದು ಇತ್ತು. ಎರಡನೇ ಪಿಯುಸಿಯ ಅಕೇರಣ ಕಿರುಪರೀಕ್ಷೆ ಅಪ್ಪಗಳೆ ಒಳ್ಳೆ ಪೊದು ಬಂತಿದಾ.. ಹೆಚ್ಚು ಕಮ್ಮಿ ಮದುವೆ ನಿಗಂಟಾದಾಂಗೆ ಆತು. ಮಾಣಿ ಕಡೆಯವರ ಮೊದಲ ಷರತ್ತೇ ಮದುವೆ ಆದ ಮೇಲೆ ಕಾಲೇಜಿಂಗೆ ಹೋಪಲೆ ಇಲ್ಲೆ ಹೇಳಿ!.

ಕೂಸಿಂಗೆ ತಾನು ಕಂಡ ಕನಸು ಗಾಳಿಗೋಪುರ ಹೇಳಿ ತೋಚಲೆ ಸುರು ಆದ್ದು ಅಂಬಗಳೇ.. ಹಾಂಗೇಳಿ ಅದು ಒದುತ್ತರ ಕಮ್ಮಿ ಮಾಡಿತ್ತಿಲ್ಲೆ. ಕೈಗೆ ಹಾಲ್ಟಿಕೇಟು ಸಿಕ್ಕುವ ದಿನ ಇದರ ಬದ್ದ. ಫ್ರೆಂಡಿನತ್ತರೆ ಹೇಳಿ ಹಾಲ್ಟಿಕೇಟು ತರಿಸುತ್ತು ಕೂಸು. ಗುರಿಕ್ಕಾರ್ರು, ಕುಲ ಪೌರೋಹಿತ್ಯರ ಉಪಸ್ಥಿತಿಲಿ ಕಾಗದವೂ ಬರದವು. ಒಳ್ಳೆ ಗಟ್ಟಿ ಕುಳವರಿದಾ, ಕೂಸಿನ ಅಪ್ಪಂಗೆ, ಸೋದರ ಮಾವಂಗೆ ಭಾರಿ ಹಿಡಿಸಿತ್ತು. ನಿಶ್ವಯ ಆದ ಮೇಲೆ ಮತ್ತೆ ಸಮಯ ಮುಂದೆ ಕೊಂಡು ಹೋಪಲೆ ಇಲ್ಲೆ ಇದಾ. ಪರೀಕ್ಷೆ ಮುಗಿದ ಮೇಲೆ ಪರೀಕ್ಷೆ ಹೇಳಿ ನಿಗಂಟು ಮಾಡಿದವು. ಅದಕ್ಕೆ ಸರಿಯಾದ ಮೂರ್ತವುದೇ ಸಿಕ್ಕಿತ್ತು.

ಪರೀಕ್ಷೆ ಲಾಯ್ಕಾ ಮಾಡಿತ್ತನ್ನೆ ಕೂಸು. ಆದರೆಂತ ಮಾಡುದು. ಮದುವೇ ಹೇಳ್ತ ಜೀವನದ ಪರೀಕ್ಷೆ ಬರವಲೆ ಮನೆಯವು ಬಲವಂತವಾಗಿಯೇ ಕಟ್ಟಿಸಿತ್ತವು! ಅದಕ್ಕೆ ಓದೆಕ್ಕೇಳಿ ಇಲ್ಲೆ ಇದಾ. ಅದರಲ್ಲೂ ಕೂಸು ಪಾಸಾತು. ಅದರ ಆಸೆ ನೀರಿಲ್ಲಿಪ್ಪ ಗುಳ್ಳೆಯಾಂಗೆ ಕ್ಷಣಾರ್ಧಲ್ಲಿ ಒಡೆದು ಹೋತು. ಕಾಲೇಜಿಂಗೆ ಹೋಯೆಕ್ಕೆ ಹೇಳ್ತ ಆಸೆಯ ಕೊರಳಿಂಗೆ ತಾಳಿ ಬೀಳುವ ಸಂದರ್ಭಲ್ಲಿ ಬಿಟ್ಟು ಬಿಟ್ಟತ್ತು. ಇನ್ನೆಏನಿದ್ದರು, ಗೆಂಡ, ಅತ್ತೆ ಮಾವಂ, ಅತ್ತಿಗೆಕ್ಕೊ, ಮೈದುನರು ಹೇಳ್ತ ಭಾವನೆ ಅಂಬಗಳೇ ಕೂಸಿನ ಮನಸ್ಸಿಲ್ಲಿ ಹುಟ್ಟಿಯಾಗಿತ್ತು. ಎನಗೆ ಕಾಲೇಜಿಂಗೆ ಹೋಪಲೆ ಎಡಿಗಾಯಿದಲ್ಲನ್ನೇ ಹೇಳಿ ಅದೆಂತು ಸುಮ್ಮನೆ ಕೂಯಿದಿಲ್ಲೆ. ಸಂಸಾರವ ಚೆಂದಕ್ಕೆ ನಿಭಾಯಿಸಿಕೊಂಡು ಹೋಯಿದು. ಈಗ ಮಕ್ಕಳೂ ಇದ್ದವು. ಈಗ ಅದಕ್ಕೇನಿದ್ದರೂ ಅದರ ಮಕ್ಕಳೇ ಪ್ರಪಂಚ. ಎನ್ನ ಮಕ್ಕ ಭವಿಷ್ಯಲ್ಲಿ ಒಳ್ಳೆಯವರಾಗಿರೆಕ್ಕು ಹೇಳ್ತ ಉದ್ದೇಶ ಮಾತ್ರ ಕೂಸಿಂಗೆ. (ಈಗ ಹೆಮ್ಮಕ್ಕೊ!)

ಇದು ಕೂಸಿನ ಕತೆಯಾದರೆ ಮತ್ತೊಬ್ಬ ಮಾಣಿಯ ಕತೆ ಇನ್ನೊಂದು ರೀತಿಯದ್ದು. ಹೀಂಗೆ ಒಂದರಿ ಅವನ ವ್ಯತೆಯ ಕತೆಯ ಎನ್ನತ್ತರೆ ಹೇಳಿತ್ತಂ. ಆದರೆ ಆ ಕಥೆಯ ಆರತ್ರೂ ಹೇಳ್ಳಾಗ ಎಂಬ ಕಂಡೀಷನ್ನಿನ ಮೇಲೆ. ಹಾಂಗಾಗಿ ಅವನ ಹೆಸರು ಹೇಳುವ ಅವಕಾಶ ಎನಗೆ ಇಲ್ಲಿಲ್ಲೆ.

ಮಾಣಿಯ ಮನೆಲಿ ಪೈಸೆಗೆಂತವುದೆ ಕೊರತೆ ಇಲ್ಲೆ. ಖಂಡಿಗಟ್ಲೆ ಅಡಕ್ಕೆ ಆವುತ್ತಿದಾ. ಮತ್ತೆ ತೆಂಗುದೆ ಇದ್ದು. ತೋಡದ ಎಡಕ್ಕಿಲ್ಲಿ ಬಾಳೆಯುದೆ, ಕೊಕ್ಕೊ ನೆಟ್ಟಿದವು. ಅಂವ ಹೇಳಿದ ಕಾಲೇಜು, ಕೋರ್ಸಿಂಗೆ ಸೇರಿಸಿತ್ತವು. ಅವಂಗೆ ಸಾಪ್ಟುವೇರು ಇಂಜಿನಿಯರು ಆಯೆಕ್ಕು ಹೇಳ್ತ ಆಸೆ. ಹಾಂಗಾಗಿ ಅದೇ ಕೋರ್ಸಿಂಗೆ ಸೇರಿದಂ. ಮೋರೆಲಿ ಮೀಸೆ ಚಿಗುರುಲೆ ಸುರು ಮಾಡಿಯಪ್ಪ ಮನಸ್ಸಿಲ್ಲೂ ಪ್ರೀತಿ ಮಾಡುವ ಭಾವನೆ ಹುಟ್ಟುತ್ತು ಹೇಳ್ತ ಮಾತು ಹಿಂದಿನಿಂದಲೇ ಇದ್ದಿದಾ.!
ಮಾಣಿಯ ಕೋಲೇಜಿಲ್ಲಿ ಮತ್ತೊಂದು ಕ್ಲಾಸಿಲ್ಲಿ ಒಂದು ಕೂಸುದೆ ಕಲ್ತುಗೊಂಡಿತ್ತು. ಆ ಕೂಸಿನ ಮೇಲೆ ಮಾಣಿಗೆ ಸಾಫ್ಟ್ ಕಾರ್ನರು!. (ಲವ್ವಿನ ಮೊದಲ ಸ್ಟೇಜಡ ಇದು, ಎನಗೆ ಗೊಂತಿಲ್ಲೆ ಬಿಂಗಿ ಮಾಣಿಯೊಬ್ಬ ಹೇಳಿದ್ದು!). ಕೂಸಿನ ಹತ್ತರೆ ನೇರ ಮಾತಾಡ್ಲೆ ಇವಂಗೆ ಬೆಟ್ರಿ ಇಲ್ಲದ್ದೋ, ಅಥವಾ ಮನಸ್ಸಿನ ಭಾವನೆ ವೆಕ್ತಪಡಿಸಲೆ ಅಂಜಿಕೆಯೋ ಎನಗರಡಿಯ. ಅಂತು ಇಂತು ಅದರ ಕಂಡಪ್ಪಗ ಸಣ್ಣಕ್ಕೆ ನೆಗೆ ಮಾಡ್ಲೆ ಸುರು ಮಾಡಿದ ಮಾಣಿ. ಇವಂ ಹಲ್ಲು ಗಿಂಜುದರ ನೋಡಿ ಕೂಸುದೇ ಸ್ಮೈಲ್ ಕೊಡ್ಲೆ ಸುರುಮಾಡಿತ್ತು ನಮ್ಮ ಜಾತಿ ಮಾಣಿ ಅಲ್ಲದಾ ಹೇಳಿ!.

ಅಷ್ಟಕ್ಕೆ ಮಾಣಿ ಪೆರ್ಚಿ ಕಟ್ಲೆ ಸುರು ಮಾಡಿದಂ. ಸ್ವರ್ಗಕ್ಕೆ ಇನ್ನು ಮೂರೇ ಗೇಣು ಹೇಳ್ತ ಮಾತು ಎನಗೆ ಅಂಬಗ ಅವನ ನೋಡುವಾಗ ನೆಂಪಾಗಿಗೊಂಡು ಇತು!. ಅದರ ಮೊಬೈಲು ನಂಬರುರುದೆ ಸಿಕ್ಕಿತ್ತಿದಾ ಇವಂಗೆ. ಸುರು ಅದಾ... ಹೊಟ್ಟೆಂದ ಹೋಪಲೆ ಸುರು ಅಪ್ಪ ಹಾಂಗೆ ಇವನ ಮೆಸೇಜು ಕೂಸಿಂಗೆ ಕಳೂಹಿಸಲೆ!. ಪಾಪಾ ಕೂಸುದೆ ನಮ್ಮವನೇ ಮಾಣಿ ಅಲ್ಲದಾ ಹೇಳಿ ರಿಪ್ಲೈ ಮಾಡಿಗೊಂಡಿತ್ತು. ಮಾಣಿ ಅದನ್ನೇ ಲವ್ ಹೇಳಿ ಗ್ರೇಶಿದ. ಇಷ್ಟಾದರೂ ತನ್ನ ಮನಸ್ಸಿಲ್ಲಿ ಇಪ್ಪ ಭಾವನೆಗಳ ಕೂಸಿನ ಹತ್ರೆ ಹೇಳ್ಳೆ ಹೆರಟಿದಾಂಲ್ಲೆ. ಹೀಂಗೆ ಮೆಸೇಜು ಕಳಿಸಿಗೊಂಡೇ ಕಾಲ ಕದಂ. ಏಕೋ ಎನೋ ಕೂಸಿಂಗೆ ಮಾಣಿಯ ರೂಟು ತಪ್ಪಿದ್ದು ಹೇಳ್ತ ಸಂಶಯ ಬಂತು. ಅಷ್ಟು ಹೊತ್ತಿಂಗೆ ಕೋಲೇಜು ಕೂಡ ಮುಕ್ಕೊಂಡು ಬಂತಿದಾ...ಕೂಸು ಮಾಣಿಯ ಎವಾಯ್ಡ್ (ದೂರ ಹೋಪಲೆ) ಮಾಡ್ಲೆ ಸುರು ಮಾಡಿತ್ತು. ಅವಂ ಹತ್ತು ಮೆಸೇಜು ಕಳಿಸಿದರೆ ಕೂಸು ಒಂದು ಕಳಿಸಿಕೊಂಡು ಇತ್ತು. ರೈಲಿನ ಚಕ್ರ ಪಟ್ಟಿಂದ ಕೆಳ ಜಾರ‍್ತಾ ಇದ್ದು ಹೇಳ್ತ ಭಾವನೆ ಮಾಣಿಗೆ ಬಪ್ಪಲೆ ಸುರಾತು.

ಅದರ ಒಂದು ಮೆಸೇಜು ಬಾರದ್ದೇ ಹೋದರೆ ಮಾಣಿಯ ಮನಸ್ಸಿಂಗೆ ಸಮಾಧಾನ ಆಗಿಯೊಂಡಿತ್ತಿಲ್ಲೆ. ಮೆಸೇಜು ಮಾಡು ಹೇಳಿ ಕೂಸಿನ ಪೀಡ್ಸಲೆ ಸುರು ಮಾಡಿದ. ಅಷ್ಟರ ಮಟ್ಟಿಂಗೆ ಅವ ಕೂಸಿನ ಲವ್ವು ಮಾಡಿಗೊಂಡಿತ್ತಂ ಇದಾ. ಒಂದು ದಿನ ಕೂಸು ನೇರವಾಗಿ ಹೇಳಿತ್ತು ’ಎನಗೆ ನಿನ್ನ ಹಾಂಗೆ ಸುಮಾರು ಜನ ಫ್ರೆಂಡ್ಸುಗ ಇದ್ದವು. ಹಾಂಗಾಗಿ ಏವಾಗಲೂ ಮೆಸೇಜ್ ಮಾಡ್ಲೆ ಎಡಿಯ’. ಕೂಸಿನ ಬಾಯಿಂದ ಏವ ಮಾತಿನ ಮಾಣಿ ನಿರೀಕ್ಷಿಸಿದ್ದಾಂಲ್ಲೆಯೋ ಆ ಮಾತು ಅದರ ಬಾಯಿಂದ ಬಂದು ಹೋತು. ಆಗ ಜಾರ‍್ತ ಇದ್ದು ಹೇಳಿ ಜಾನ್ಸಿದ ರೈಲಿನ ಚಕ್ರ ಪಟ್ಟಿಂದ ಈಗ ಜಾರಿಯಾಗಿತ್ತು!.

ಎರಡು ದಿನ ಮಾಣಿಯ ಮೋರೆ ನೋಡ್ಲೆ ಎಡಿಯ... ಅಷ್ಟೂ ಫೀಲು ಮಾಡಿಕೊಂಡು ಇತ್ತಿದಂ. ಈ ಎರಡು ದಿನಲ್ಲಿ ಹಿಂದೆ ಕೂಸು ಮಾಡಿದ ಮೆಸೇಜುಗಳೆಲ್ಲಾ ಮತ್ತೊಂದರಿ ಓದಿದ!.. ಕಣ್ಣೀರು ಹಾಕಿದಂ.... ಹಾಂಗೆ ಎಷ್ಟು ದಿನ ಕೂರುಗು ಮಾಣಿ.... ಅವನ ಜೀವನ ಅಲ್ಲಿಗೆ ಮುಗುದತ್ತಾ.. ಮುಂದೆ ಇನ್ನೂ ಇಲ್ಲೆಯಾ?...
ಎಂಥಾತೋ ಏನೋ ಸೀದಾ ಸೆಲೂನಿಂಗೆ ಹೋದ.. ಲಾಯಿಕಲ್ಲಿ ತಲೆ ಕುಚ್ಚಿ ತೆಗೆಸಿ ಬಂಡಾರಿಯತ್ರೆ ನವರತ್ನ ಎಣ್ಣೆಲೆ ಮಸಾಜುದೆ ಮಾಡ್ಸಿದಂ...ಎಲ್ಲವೂ ಇಂದಿಗೆ ಕೊನೆಯಾಗಲಿ ಹೇಳಿ..! ಮನೆಗೆ ಬಂದು ಬೆಶಿ ಬೆಶಿ ನೀರಿಲ್ಲಿ ಮಿಂದು ಲಾಯ್ಕಲ್ಲಿ ಬಿದ್ದು ಒರಗಿದ... ಎನ್ನ ಜೀವನಲ್ಲಿ ಆದ ಕೆಟ್ಟ ಘಟನೆ ಹೇಳಿ ಆ ಘಟನೆಗಳ ಮರವ ನಿರ್ಧಾರ ಮಾಡಿದಂ....
ಈಗ ಮಾಣಿ ಬೆಂಗ್ಲೂರಿಲ್ಲಿ ಒಂದು ಸಾಫ್ಟ್‌ವೇರ್ ಕಂಪೆನಿಯಲ್ಲಿ ಕೆಲಸ ಮಾಡ್ತಾ ಇದ್ದ... ಎನಗೆ ಸಿಕ್ಕುವಾಗ ಸಿಕ್ಕುವಾಗ ಹೇಳ್ತ ...ನಾವು ಗ್ರೇಶಿದ್ದೆಲ್ಲಾ ಸಿಕ್ಕಿದರೆ ಅಥವಾ ಆದರೆ ನಾವು ಹೀಂಗಿರ‍್ತಾ.. ಭಾವ ಹೇಳಿ!... ಆ ಮಾತಿಂಗೆ ಆನುದೆ ತಲೆ ಅಪ್ಪು ಹೇಳಿ ತಲೆ ಆಡ್ಸುತ್ತೆ. ಎಂತಕೆ ಹೇಳಿದರೆ ಆ ಮಾತು ಅಷ್ಟು ಸತ್ಯವಾದ ಮಾತು...

ಕೆಲವು ತಿಂಗಳ ಹಿಂದೆ ಆ ಕೂಸಿಂಗೆ ಮದುವೆ ಆದ ವಿಷಯ ಗೊಂತಾತು ಈ ಮಾಣಿಗೆ. ಇಲ್ಲಿಂದಲೇ ಮನಸ್ಸಿಲ್ಲಿ ಅದಕ್ಕೆ ವಿಶ್ ಮಾಡಿದಂ!. ಜೀವನ ಅವನ ಸಂಪೂರ್ಣವಾಗಿ ಬದಲಾಯಿಸಿದ್ದು. ತುಂಬ ಪ್ರಾಕ್ಟಿಕಲ್ ಆಗಿ ಅವಂ ಆಲೋಚನೆ ಮಾಡ್ಲೆ ಸುರು ಮಾಡಿತ್ತಂ...

ಇದು ಕೇವಲ ಎರಡು ಉದಾಹರಣೆಗೊ. ಹೀಂಗಪ್ಪದೇ ಅಥವಾ ಬೇರೆ ಬೇರೆ ನಮೂನೆಯ ಘಟನೆ ಪ್ರತಿಯೊಬ್ಬರ ಜೀವನಲ್ಲಿ ನಡೆದಿಕ್ಕು. ಆದರೆ ಭವಿಷ್ಯ ಹೇಳ್ತದು ಇರ್ತಲ್ಲಾ. ಅದು ಎಲ್ಲಾ ಘಟನೆಂಗಳ ಮರವ ಹಾಂಗೆ ಮಾಡ್ತು.
ಮರವಲೆ ಎಡಿಯದ್ದವು ಆತ್ಮಹತ್ಯೆಯಂಥ ನಿರ್ಧಾರವ ತೆಕ್ಕೋಳ್ತವು...ಈ ನಿರ್ಧಾರಕ್ಕೆ ಆರುದೆ ಬಪ್ಪಲಾಗ..
ಎಂತಕೆ ಹೇಳಿದರೆ ಜೀವನ ಹೇಳಿದರೆ ಇಷ್ಟೇ ಅಲ್ಲಾ.. ಭವಿಷ್ಯ ಇನ್ನೂ ಇರ‍್ತು...ನಮ್ಮ ಎದುರುಗೊಂಬಲೆ.. ಬಪ್ಪ ಎಲ್ಲಾ ಸವಾಲಿನ ಸ್ವೀಕರಿಸಿಯಪ್ಪಗಳೇ ಜೀವನಕ್ಕೆ ಒಂದು ಅರ್ಥ ಬಪ್ಪದು. ಎಂತ ಹೇಳ್ತಿ..

ಏನಾಗಲೀ.. ಮುಂದೆ ಸಾಗು ನೀ...
ಬಯಸಿದ್ದೆಲ್ಲಾ ಸಿಗದು ಬಾಳಲಿ.... ಬಯಸಿದ್ದೆಲ್ಲಾ ಸಿಗದು ಬಾಳಲಿ....


ಪ್ರೀತಿಲಿ ಕೆಪ್ಪಣ್ಣ..