Wednesday, June 16, 2010

ಮತ್ತೆ ಮತ್ತೆ ಬರಲಿ ಬಾಲ್ಯ....

ಳೆದ ವಾರ ಕೆಪ್ಪಣ್ಣನ ಕ್ಯಾಂಪು ಕೊಡೆಯಾಲಲ್ಲಿ. ಆಪೀಸಿಂಗೆ ನಾಲ್ಕು ದಿನ ರಜೆ ಹಾಕಿ ಹೆರಟದು. ಬೆಂಗ್ಳೂರಿಂದ ಆನೊಬ್ಬನೇ. ಗುರಿಕ್ಕಾರ, ಅಜ್ಜಕಾನ ಬಾವ, ಗುಣಾಜೆ ಮಾಣಿಯಾದಿಯಾಗಿ ಎಲ್ಲರೂ ಆಚಕರೆ ಮಾವನ ಮದುವೆ ಸುಧಾರಸ್ಲೇ ಹೇಳಿ ಮೊದಲೆ ಹೋಗಿತ್ತವು. ಒಪ್ಪಣ್ಣ ಹೇಂಗೂ ಊರಿಲ್ಲೆ ಇಪ್ಪದಿದಾ.. ಕೊಡೆಯಾಲಲ್ಲಿ ಎಲ್ಲರೂ ಒಟ್ಟಿಂಗೆ ಸಿಕ್ಕುತ್ತದು ಹೇಳಿ ಬೆಂಗ್ಳೂರಿಲ್ಲಿ ಮಾತಾಗಿತ್ತು.

ಕೊಡೆಯಾಲಲ್ಲಿ ನಮ್ಮ ಬೈಲಿನವೂ ತುಂಬಾ ಜೆನ ಇದ್ದವಿದಾ. ನಮ್ಮ ಯೇನಂಕೂಡ್ಳಣ್ಣನ ಕರ್ಮಭೂಮಿ ಅದು. ಅಲ್ಲಿಗೆ ಹೋದಿಪ್ಪಗಾ ಅವನ ಕಂಡು ಮಾತಾಡಸದ್ದೇ ಇದ್ದರೆ, ಆನು ಅಲ್ಲಿಗೆ ಹೋದ್ದು, ಅವಂಗೆ ಮಾತಾಡ್ಳೆ ಸಿಕ್ಕದ್ದ ವಿಚಾರಂಗಳ ಮರವ ವರೆಗೆ ಎನ್ನತ್ತರೆ ಮಾತಾಡಿಕ್ಕ ಅವ°. (ಅಷ್ಟು ಕೊಂಗಾಟದ ಪ್ರೀತಿ ಅವಂಗೆ ಎನ್ನತ್ರೆ!). ಅವ° ಮಾಂತ್ರ ಅಲ್ಲದ್ದೆ, ಆಲಂಕೋಡ್ಲು ಬಾವ, ಪೆರುಮುಂಡ ಮಾಣಿ, ಮಂಗ್ಳೂರು ಅಕ್ಕ° ಹೀಂಗೆ ಎಲ್ಲರುದೇ ಅಲ್ಲೇ ಇಪ್ಪದಿದಾ. ಅವರನ್ನೂ ಭೆಟ್ಟಿಯಾಗದಿದ್ದರೆ ಎನ್ನ ಮನಸ್ಸಿಂಗೂ ಸಮಾಧಾನ ಇಲ್ಲೆ.
ಎಲ್ಲೊರಿಂಗೂ ಫೋನ್ ಮಾಡಿ ಐಡಿಯಲ್ ಕ್ರೀಂ ಪಾರ್ಲರ್‌ಲ್ಲಿ ಸಿಕ್ಕುವಾ° ಹೇಳಿ ಆತು ಹೊತ್ತೊಪ್ಪಾಗ. ಆದರೆ ಬೆಂಗಳೂರಿನ ಮಾಣಿಯಂಗ ಎಲ್ಲಿದ್ದವು? ಒಪ್ಪಣ್ಣನೂ ಕೈಕೊಟ್ಟ°. ಐಡಿಯಲ್ ಕ್ರೀಂ ಪಾರ್ಲರಿಲ್ಲಿ ಒಟ್ಟು ಸೇರಿದ್ದು ಆನು, ಯೇನಂಕೂಡ್ಳಣ್ಣ, ಮಂಗ್ಳೂರು ಅಕ್ಕ, ಪೆರುಮುಂಡ ಮಾಣಿ ಮತ್ತೆ ಆಲಂಕೋಡ್ಳು ಬಾವ. ನಾವಿಷ್ಟೆ ಜನವೋ.. ಅವು ಎಲ್ಲಿದ್ದವು? ಹೇಳಿ ಕೇಳಿದ ಯೇನಂಕೂಡ್ಳಣ್ಣ ಎನ್ನ ಕಂಡ ಕೂಡ್ಳೆ. ಉಮ್ಮಪ್ಪ ಎಂತು ಸುದ್ದಿಲ್ಲೆ ಸಮೋಸವೂ ಕಳಿಸಿದ್ದವಾಲ್ಲೆ. ಬಕ್ಕು ಬಾರದ್ದರೆ ಒಳ್ಳೆದಾತು, ಬಿಲ್ಲು ರಜ್ಜ ಕಡಮ್ಮೆ ಅಕ್ಕು ಹೇಳಿ ಹೇಳಿದಂ ಪೆರುಮುಂಡ ಮಾಣಿ ತಮಾಷೆಗೆ.! ನಿಜವಾಗಿ ಹೇಳೆಕ್ಕಾದರೆ ಹಂಚಿ ತಿಂಬದರಲ್ಲಿ ನಂಬಿಕೆ ಮಡಿಗಿಪ್ಪವೇ ಅಲ್ಲಿದ್ದದು. ಅಂತು ವಿಧ ವಿಧ ಐಸ್ ಕ್ರಿಂಗೆ ಓರ್ಡರು ಮಾಡಿದೆಯಾಂ. ದೊಡ್ಡ ಹೋಟ್ಳು, ಕ್ರೀಂ ಪಾರ್ಲರಿಲ್ಲಿ ಓರ್ಡರು ಮಾಡಿ ಅರ್ಧ ಗಂಟೆ ಕಾಯೆಕ್ಕಪ್ಪ ವಿಚಾರ ಎಲ್ಲೊರಿಂಗೂ ಗೊಂತಿದ್ದನ್ನೆ. ಎಂಗಳುದೆ ಕಾಯಿಕ್ಕೊಂಡು ಇತ್ತಿದೆಯಾಂ ಸಪ್ಲೇಯರ್ ಐಸ್ ಕ್ರೀಂ ತಪ್ಪಲೆ.

ಹೀಂಗೆ ಕಾದುಗೊಂಡಿಪ್ಪಗ ಸುರು ಆತು ಲೊಟ್ಟೆ ಪಟ್ಟಾಂಗ, ಹೊತ್ತು ಹೋಯೆಕ್ಕನ್ನೇ. ಎಲ್ಲೊರಿಂಗು ಒಟ್ಟಿಂಗೆ ಕೋಲೇಜು ದಿನಂಗಳ ನೆಂಪಾತು. ಕೆಪ್ಪಣ್ಣನ ಸಹಿತ ಎಲ್ಲೊರುದೆ ಅವರ ಸ್ಮೃತಿಕೋಶಲ್ಲಿಪ್ಪ ನೆಂಪುಗಳ ಒಂದೊಂದಾಗಿ ಹೇಳಿದೆಯಾ. ಯೇನಂಕೂಡ್ಳಣ್ಣ ಅವನ ಪ್ರೊಫೆಸರ್‌ನ ಪಿರೀಡ್‌ಲ್ಲಿ ಗಹಗಹಿಸಿ ನೆಗೆಮಾಡಿಕೊಂಡಿದ್ದ ಕಥೆಯ ನೆಗೆಮಾಡಿಗೊಂಡೆ ಹೇಳಿದ! ಅದರ ಕೇಳಿ ಎಂಗೊದೆ ನೆಗೆ ಮಾಡ್ಳೆ ಮಾತ್ರ ಬಾಕಿ. ಅಷ್ಟಪ್ಪಗ ಪೆರುಮುಂಡ ಮಾಣಿ ಒಂದು ಡೈಲಾಗ್ ಹೊಡೆದಾಂ ಇಂಗ್ಲಿಷಿಲ್ಲಿ. ’ಸ್ಟ್ಯೂಡೆಂಟ್ ಲೈಫ್ ಈಸ್ ದ ಗೋಲ್ಡನ್ ಲೈಫ್’ ಹೇಳಿ. ಅವನ ಡೈಲಾಗ್ ಕೇಳಿ ಆನು ಶಭಾಶ್ ಹೇಳಿ ಹೇಳ್ಳೆ ಬಾಯಿ ತೆಗೆಕು, ಅಷ್ಟಪ್ಪಗ ಅದೆಲ್ಲಿಂದ ಕೋಪ ಬಂತೋ ಏನೋ ಮಂಗ್ಳೂರಕ್ಕ ’ಅಪ್ಪಪ್ಪು… ಮಾಷ್ಟ್ರುಗಳ, ಲೆಕ್ಚರ್‌ಗಳ ಲಾಲಿ (ತಮಾಷೆ) ಮಾಡ್ಳೆ ಸಿಕ್ಕುವಗ, ಕೂಸುಗಳತ್ರೆ ಲೊಟ್ಟೆ ಪಟ್ಟಾಂಗ ಹೊಡವ ಚಾನ್ಸ್ ಸಿಕ್ಕುವಾಗ ಅದು ಬಂಗಾರದ ಜೀವನ ಆಗದ್ದೆ ಇರ‍್ತಾ? ಹೇಳಿ ಮುಸುಂಟು ತಿರುಗಿಸಿತ್ತು. ವಿದ್ಯಾರ್ಥಿ ಜೀವನ ಅಲ್ಲದೆ ಬೇರಾವುದೇ ಜೀವನ ಚಿನ್ನದಾಂಗೆ ಇರ‍್ತಿಲ್ಲೆಯಾಯ್ಕು ಹೇಳ್ತ ಒಕ್ಕಣೆ ಬೇರೆ ಕೊಟ್ಟತ್ತು. ಆನೆಂತಕಾರು ಈ ಮಾತು ಹೇಳಿದನೋ ಹೇಳಿ ಅನುಸಿತ್ತು ಪೆರುಮುಂಡ ಮಾಣಿಗೆ. ನಿಜಾಂಶ ಹೇಳೆಕ್ಕಾರೆ ಅವಂಗೆ, ಅಲ್ಲಿ ಇದ್ದವಕ್ಕೆ ವಿದ್ಯಾರ್ಥಿ ಜೀವನ ಬಂಗಾರದ್ದಾಗಿತ್ತಿಲ್ಲೆ. ಎಲ್ಲರುದೇ ಕಷ್ಟ ಪಟ್ಟೇ ಶಿಕ್ಷಣ ಪಡೆದವು. ಲೋಕ ರೂಢಿ ಮಾತಿದಾ, ಪಕ್ಕನೆ ಪೆರುಮುಂಡ ಮಾಣಿಗೆ ಹೇಳಿಹೋತು.. ಅಂತು ಅಕ್ಕನ ಕ್ಷಮೆ ಗಿಮೆ ಕೇಳಿ ಅದರ ಸಮಾಧಾನ ಮಾಡಿಗೊಂಡಿಪ್ಪಗ ಓರ್ಡರ್ ಮಾಡಿದ ಐಸ್‌ಕ್ರೀಂ ಬಂತು. ಕ್ರೀಂ ತಂಪಲ್ಲದೋ ಕೋಪ ಎಲ್ಲಾ ಇಳಿದು ಹೋತು ಅಕ್ಕಂಗೆ! ನಮ್ಮ ಬೈಲಿನ ಜವ್ವನಿಗರ ಅನುಪಸ್ಥಿತಿಯಲ್ಲಿ ಇದರ ತಿನ್ನಕ್ಕನ್ನೆ ಹೇಳ್ತ ಸಣ್ಣ ವೇದನೆಲಿಯೇ (?) ಕ್ರೀಂ ತಿಂದು ಅಲ್ಲಿಂದ ಹೆರಟೆಯಾ°.

ಎಲ್ಲರ ಮನೆಯೂ ಒಂದೊಂದು ಹೊಡೆಲಿ ಇಪ್ಪದಿದಾ. ಸ್ಟೇಟ್‌ಬ್ಯಾಂಕಿಂಗೊರೆಗೆ ಒಟ್ಟಿಂಗೆ ಬಂದು ಎಲ್ಲರೂ ಅವರವರ ಬಸ್ ಹತ್ತಿದೆಯಾ ಅತ್ಲಾಗಿತ್ಲಾಗಿ ಟಾಟಾ ಹೇಳಿ. ಆನು ಪುತ್ತೂರಿಂಗೆ ಬಪ್ಪ ಬಸ್ ಹತ್ತಿದೆ. ಕೊಡೆಯಾಲ ಪುತ್ತೂರಿಗೆ ಬರೆಕಾರೆ ರಜ್ಜ ಹೊತ್ತು ಬೇಕಿದಾ. ಕಿಟಿಕಿಯ ಹತ್ತರೆ ಕೂದುಗೊಂಡು ಬಪ್ಪಗ ರಭಸಲ್ಲಿ ಬೀಸುವ ಗಾಳಿಗೆ ವರಕ್ಕು ತೂಗಿದ ಹಾಂಗೆ ಆತು. ಆದರೆ ವರಕ್ಕು ಬೈಂದಿಲ್ಲೆ.
ವಿದ್ಯಾರ್ಥಿ ಜೀವನ ಒಬ್ಬೊಬ್ಬಂಗೆ ಒಂದೊಂದು ಅನುಭವ ಕೊಟ್ಟಿಕ್ಕು. ಕೆಲವು ಜನಕ್ಕೆ ನಿಜವಾಗಿಯು ಅದು ಬಂಗಾರದ ಹಾಂಗೆ ಇದ್ದಿಕ್ಕು. ಇನ್ನೊಂಬ್ಬಗೆ ಬಂಗಾರದ ಜೀವನ ಆಗಿರ. ಅದು ಅವು ಅವು ತಿಳುಕ್ಕೊಂಡ ಹಾಂಗೆ ಅದು ಅವು ಏವ ಪರಿಸ್ಥಿತಿಲಿ ಆ ಜೀವನವ ಎದುರಿಸಿದ್ದವು ಎಂಬುದರ ಮೇಲೆ ನಿಂತಿರ‍್ತು ಹೇಳುದು ಎನ್ನ ಅನಿಸಿಕೆ. ಕೆಪ್ಪಣ್ಣಂಗೆ ವಿದ್ಯಾರ್ಥಿ ಜೀವನ ಬಂಗಾರದ್ದು ಆಗಿರದಿದ್ದರೂ, ಕೀಜಿ, ಕಬ್ಬಿಣ್ಣ ಅಂತೂ ಆಗಿತ್ತಿಲ್ಲೆ!. ಅದರಳಿ..

ಮಂಗ್ಳೂರು ಅಕ್ಕನ ಮಾತು ತಲೆಯ ಒಳ ಕೊರವಲೆ ಸುರು ಮಾಡಿತ್ತು. ಅದರ ಒಕ್ಕಣೆ, ಮೆದುಳಿನ ಎಲ್ಲಾ ನರಂಗಳಲ್ಲು ಹರಿದಾಡಿತ್ತು! ಚೆಲಾ..ಅಕ್ಕನ ಮಾತಿಲ್ಲಿದೆ ಪಾಯಿಂಟ್ ಇದ್ದು ಹೇಳಿ ಎನಗೆ ಅನುಸಿತ್ತು. ತಕ್ಷಣ ಎನ್ನ ನೆಂಪಿಂಗೆ ಬಂದದು ಬಾಲ್ಯ ಜೀವನ! ಎಷ್ಟು ಚೆಂದದ ಜೀವನ ಅದು. ಆಟ, ಹುಡುಗಾಟ, ಪಾಠ, ತುಂಟಾಟ, ಕೊಂಗಾಟ. ಬೆಚ್ಚಂಗಿಪ್ಪ ಅಬ್ಬೆಯ ಅಪ್ಪುಗೆ, ಅಪ್ಪನ ಪ್ರೀತಿ, ನೆರೆಕರೆಯವರ ಪ್ರೀತಿಯ ಆಶೀರ್ವಾದ, ಹಾರೈಕೆ. ಆ ಜೀವನ ಬಂಗಾರದ್ದಲ್ಲದೇ ಮತ್ತೆಂತರ? ಅದಕ್ಕಿಂತಲೂ ಒಂದು ಒಂದು ಕೈ ಮೇಲೆಯೇ.
ಬಾಲ್ಯ ಜೀವನನಲ್ಲಿ ನಡೆದ ಘಟನೆಗಳ ಮರವೆಲಡಿಗಾ?… ನಿಜಕ್ಕೂ ಹೇಳೆಕ್ಕಾರೆ, ಆ ಜೀವನವ ಬಂಗಾರ, ವಜ್ರ, ವೈಢೂರ್ಯ,ಮಾಣಿಕ್ಯಂದ ಅಳವಲೆಡಿಗಾ? ಖಂಡಿತ ಎಡಿಯ.
ಎಲ್ಲಾ ನೆಂಪಾವ್ತಾ ಇದ್ದು ಈಗ… ಸ್ಮೃತಿ ಪಟಲಲ್ಲಿ ಹಾಸಿಗೆಯ ಹಾಂಗೆ ಸುತ್ತು ಹಾಕಿಕೊಂಡಿಪ್ಪ ನೆಂಪುಗ ಈಗ ಒಂದೊಂದೆ ಸುರುಳಿಯಾಗಿ ಬಿಚ್ಚಿಕೊಳ್ತಾ ಇದ್ದು.
ಬಾಲ್ಯವ ವಿವರಿಸುದು ಹೇಂಗೆ? ಗೊಂತಾವ್ತಾ ಇಲ್ಲೆ, ಹೇಂಗೆ ವಿವರುಸೆಕ್ಕು ಹೇಳ್ತದು! ಆ ಜೀವನಲ್ಲಿ ಹೇಂಗೆ ಮಾಡಿದರೂ ಚೆಂದ. ನಿಷ್ಕಲ್ಮಶ ಮನಸ್ಸು ಹೊಂದಿಪ್ಪ ಕಾಲ ಅದು. ಅಲ್ಲಿ ದ್ವೇಷ ಅಸೂಯೆಗೆ ಅವಕಾಶ ಇಲ್ಲೆ. ಕೋಪ ತಾಪ ಅಂತು ಇಲ್ಲಲೇ ಇಲ್ಲೆ.
ಅಂಬಗ ಆಡಿದ ಆಟೊಂಗಕ್ಕೆ ಲೆಕ್ಕ ಇದ್ದ? ಎಂಥೆಂಥಾ ಆಟಂಗಳ ಆಡಿದ್ದಿಲ್ಲೆ. (ಆಟಂಗಳ ಬಗ್ಗೆ ಅಜ್ಜಕಾನ ಬಾವ ಬರೆತ್ತೆ ಹೇಳಿ ಹೇಳಿದ್ದ).
ಅಂಬಗ ಎಂಥ ಮಾಡಿದರೂ ಚೆಂದವೇ. ಮನಸ್ಸಿಂಗೆ ಸಿಕ್ಕಿಯೊಂಡಿದ್ದವು ಆನಂದವೇ. ಮಹಾನಂದವೇ!

ಕಾಲ ಬದಲಾದಾಂಗೆ ಜೀವನ ಕ್ರಮವೂ ಬದಲಾಯಿದು. ನಮ್ಮ ಹಿರಿಯೋರ ಬಾಲ್ಯ ಜೀವನಕ್ಕೂ, ಈಗಾಣ ಜವ್ವನಿಗರ ಬಾಲ್ಯ ಜೀವನಕ್ಕು, ಈಗಾಣ ಮಕ್ಕ ಅನುಭವಿಸುತ್ತಿಪ್ಪ ಜೀವನಕ್ಕೆ ಅಜಗಜಾಂತರ ವ್ಯೆತ್ಯಾಸ ಇಕ್ಕು. ನಾವು ಬಾಲ್ಯಲ್ಲಿ ಆಡಿದ ಆಟಂಗಳ ನಮ್ಮ ಹೆರಿಯವು ಆಡಿರವು, ಈಗಣ ಮಕ್ಕ ಆಡ್ತಾ ಇಲ್ಲೆ! ಆದರೆ ಅವರವರ ಬಾಲ್ಯದ ಅನುಭವಂಗ ಬೇರೆ ಬೇರೆ. ಅವಕ್ಕೆ ಅದರ ಮರವಲೆಡಿಯಾ. ಅದು ಅವರ ಜೀವನ ಪೂರ್ತಿ ಬೆಚ್ಚಂಗಿಪ್ಪ ನೆಂಪುಗಳಾಗಿ ಅವರ ಮನಸ್ಸಿನ ಮೂಲೆಲಿ ಇರ‍್ತು.
ಉದಾಹರಣೆ ಬೇಕಾರೆ ಕೊಡ್ಳಕ್ಕು. ನಿಂಗೊಗೆ ನೆಂಪಿಕ್ಕು. ನಾವು ಸಣ್ಣಾದಿಪ್ಪಗ, ಅಡಕ್ಕೆ ಕೊಯಿಲಿನ ಸಂದರ್ಭಲ್ಲಿ ಅಡಕ್ಕೆ ಬಡಿದು ಆದ ಮೇಲೆ ಕೊನೆಚ್ಚಂಗಿನ ಮೇಲೆ ಕೂದು ಆಡಿದ ಬಸ್ಸಾಟವ ಈಗಾಣ ಮಕ್ಕ ಆಡ್ತಾವೆಲ್ಲೆ, ತಂಗೆಕ್ಕಳ/ತಮ್ಮಂದ್ರ ಅಡಕ್ಕೆ ಹಾಳೆಲಿ ಕೂರ‍್ಸಿ ಅಣ್ಣಂದ್ರು/ಅಕ್ಕಂದ್ರು ಎಳಕ್ಕೊಂಡು ಹೋಗಿಂಯೊಂಡಿದ್ದ ಹಾಳೆಯ ಆಟವನ್ನೂ ಈಗಾಣವು ಆಡುವುದರ ಕಾಂಬಲೆ ಸಿಕ್ಕುಗಾ? (ಆಡ್ತರೂ ಆ ಪ್ರಮಾಣ ತುಂಬಾ ಕಮ್ಮಿ). ಅವು ಕಂಪ್ಯೂಟರಿನ ಮುಂದೆ ಕೂದೆ ಹೊತ್ತು ಕಳಗು. ಇಲ್ಲದ್ರೆ ಯೇವುದಾದರೂ ಟ್ಯೂಷನ್ನಿಂಗೆ ಮಣ್ಣ ಹೋಕು. ಕಾಲ ಬದಲಾಂದಗೆ ನಮ್ಮ ಜೀವನನಲ್ಲಿ, ಜೀವನ ಶೈಲಿಲಿ ವ್ಯೆತ್ಯಾಸ ಆದ್ದರ ಒಪ್ಪಣ್ಣ ಹಲವು ಲೇಖನನಲ್ಲಿ ನಾಜೂಕಾಗಿಯೂ ವೆಂಗ್ಯವಾಗಿಯೂ ಬರದ್ದ. ಮತ್ತೆ ಮತ್ತೆ ಬರದರೆ ಅದು ಪುನರಾವರ್ತನೆ ಅಕ್ಕು.

ಇದೆಲ್ಲಾ ಸಂತೋಷಲ್ಲಿ ಕಣ್ಣಿಲ್ಲಿ ನೀರು ತರಿಸುವ ವಿಷಯಂಗ. ಬೇಜಾರಿಲ್ಲಿ ಕಣ್ಣೀರು ಹರಿವಲೆ ಕಾರಣವಪ್ಪ ವಿಷಯಂಗಳೂ ನಮ್ಮ ಸಮಾಜಲ್ಲಿ (ಇಲ್ಲಿ ಕೇವಲ ಹವ್ಯಕ ಸಮಾಜವ ಹೇಳ್ತ ಇಲ್ಲೆ) ಇಲ್ಲದ್ದಿಲ್ಲೆ. ಹೀಂಗೆ ಸಂತೋಷಲ್ಲಿ ಬಾಲ್ಯ ಜೀವನವ ಕಳೆಯಕ್ಕಾದ ಎಷ್ಟೋ ಮಕ್ಕ ನಮ್ಮ ಸಮಾಜಲ್ಲಿ ಒಪ್ಪೊತ್ತು ಊಟಕ್ಕಾಗಿ ಭಿಕ್ಷೆ ಬೇಡುವ, ಜವ್ವನಿಗರ ಹಾಂಗೆ ಗೈಯ್ಯುವ ದೃಶ್ಯಂಗಳ ಕಂಡರೆ ನಿಜಕ್ಕೂ ಬೇಜಾರಾವುತ್ತು. ಅವರ ಪಾಲಿಂಗೆ ಅಕ್ಷರಶಃ ಬಾಲ್ಯ ಬಾಲ್ಯವಲ್ಲ. ಅದು ನರಕ. ಜೀವನದ ಮುಂದಿನ ಘಟ್ಟಗಳಲ್ಲಿ ಅವು ಅನುಭವಿಸಿದ್ದಕ್ಕಾದರ ಬಾಲ್ಯಲ್ಲೆ ಅನುಭವಿಸುತ್ತಾ ಇದ್ದವು. ಎಂಥ ವಿಪರ್ಯಾಸ. ಅವರ ಸ್ಥಿತಿ ಆರಿಂಗೂ ಬಪ್ಪಲಾಗ, ಅವರ ಬಾಲ್ಯ ಜೀವನದ ಮಹೋನ್ನತ ಕ್ಷಣಂಗಳ ಅಕ್ಕೆ ಒದಗಿಸೆಕ್ಕು ಹೇಳ್ತದು ಕರುಣಾಮಯಿ ದೇವರ ಹತ್ರೆ ಎನ್ನ ಸಣ್ಣ ಪ್ರಾರ್ಥನೆ.

ಕಡೇ ಮಾತು: ಹೇ ಬಾಲ್ಯವೇ..ನೀನೇಕೆ ಮತ್ತೆ ಬಪ್ಪಲಾಗ? ಎಲ್ಲೊರಿಂಗು ಸಂತೋಷ ತಪ್ಪಲಾಗ? ನಿನ್ನತ್ರೆ ಎನ್ನ ಕೋರಿಕೆ ಒಂದೆ.

ಬಾಲ್ಯವೇ ನೀನು ಮತ್ತೆ ಮತ್ತೆ ಮರಳಿ ಬಾ….

No comments:

Post a Comment